ಬೆಂಗಳೂರು : ನನ್ನ ಮನೆಯಲ್ಲೇ ಭಯೋತ್ಪಾದನೆಯ ಕಾರಣಕ್ಕೆ ಇಬ್ಬರು ಹುತಾತ್ಮರಾಗಿದ್ದಾರೆ, ನಮಗೆ ಭಯೋತ್ಪಾದನೆಯ ಬಗ್ಗೆ ಹೇಳಲು ಬರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಧಾನಿ ಮೋದಿ ಅವರ ವಿರುದ್ಧ ಕಿಡಿಕಾರಿದರು.
ಆನೇಕಲ್ ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿರುವ ಅವರು, ಬಿಜೆಪಿ ನಾಯಕರು ಖರ್ಗೆಯವರ ಹತ್ಯೆಯ ಕುರಿತು ಮಾತನಾಡಿದರೆ ಆ ಬಗ್ಗೆ ಮೋದಿಯವರು ಒಂದು ಮಾತನ್ನೂ ಆಡುವುದಿಲ್ಲ. ಪ್ರಧಾನಿ ಮೋದಿಯವರೇ, ನಮ್ಮ ನಾಯಕರಾದ ಖರ್ಗೆ ಅವರ ಬಗ್ಗೆ ಸಂಸ್ಕಾರದಿಂದ, ಗೌರವಯುತವಾಗಿ ಮಾತನಾಡಿ ಎಂದು ಗುಡುಗಿದರು.
ಮೋದಿ ಬಿಜೆಪಿ ನಾಯಕರ ಹೆಸರು ಹೇಳಿ ಭಾಷಣ ಮಾಡುವುದಿಲ್ಲ. ನಾನು ನಮ್ಮ ನಾಯಕರ ಹೆಸರು ಹೇಳಿ ಭಾಷಣ ಆರಂಭಿಸುತ್ತೇನೆ. ಮೋದಿ ಜೊತೆ ರೋಡ್ಶೋದಲ್ಲಿ ಸಿಎಂ ಬೊಮ್ಮಾಯಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಭಾಗಿಯಾಗುತ್ತಿಲ್ಲ. ಬೇರೆ ನಾಯಕರನ್ನು ತಮಗಿಂತಲೂ ಕೀಳು ಎಂದು ಭಾವಿಸುತ್ತಾರೆ ಎಂದರು.
ಇದನ್ನೂ ಓದಿ : ರಾಹುಲ್ ಪ್ರಧಾನಿಯಾಗಿದ್ರೆ ‘ಪಾಕಿಸ್ತಾನಕ್ಕೂ ಮುಂಚೆ ಭಾರತ ದಿವಾಳಿ’ಯಾಗುತ್ತಿತ್ತು : ಬಿ.ವೈ ವಿಜಯೇಂದ್ರ
ಮೋದಿ ಭ್ರಷ್ಟ ಮುಖ್ಯಮಂತ್ರಿಯನ್ನು ಹೊಗಳುತ್ತಾರೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರತಿಯೊಂದಕ್ಕೂ 40% ಕಮಿಷನ್ ಪಡೆಯುವ ಭ್ರಷ್ಟ ಬಿಜೆಪಿ ಸರ್ಕಾರದ ರೇಟ್ ಕಾರ್ಡ್‌ಅನ್ನು ನೀವೆಲ್ಲಾ ನೋಡಿದ್ದೀರಿ. ಆದರೂ, ಪ್ರಧಾನಿ ಮೋದಿ ಅವರು ಭ್ರಷ್ಟ ಮುಖ್ಯಮಂತ್ರಿಯನ್ನು ಹೊಗಳುತ್ತಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಅಂತಾ ಹೇಳುತ್ತಾರೆ ಎಂದು ಛೇಡಿಸಿದರು.
40% ಕಮಿಷನ್ ಸರ್ಕಾರ ಆತಂಕ ಸೃಷ್ಟಿಸಿದೆ
ಪ್ರಿಯಾಂಕಾ ಗಾಂಧಿ ಮಾತನಾಡಿ, ಮೋದಿಯವರೇ, ಕರ್ನಾಟಕದಲ್ಲಿ 4 ವರ್ಷಗಳಲ್ಲಿ 6,487 ರೈತರು, 542 ಜನ ಬಡತನದಿಂದ, 1,675 ಜನ ನಿರುದ್ಯೋಗದಿಂದ, 3,734 ಜನ ಸಾಲ – ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿ 40% ಕಮಿಷನ್ ಸರ್ಕಾರ ಆತಂಕ ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದರು.