ಬೆಂಗಳೂರು : ನನ್ನ ಬೆಳವಣಿಗೆ ಸಹಿಸದೆ ಕೆಲವರು ಷಡ್ಯಂತ್ರ ಮಾಡಿ ಆರೋಪಿಯನ್ನಾಗಿ ಮಾಡಿದರು ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದು 15 ದಿನಗಳಲ್ಲಿ ಲೋಕಾಯುಕ್ತ ಪ್ರಕರಣದಿಂದ ಮುಕ್ತಿ ಆಗುವೆ. ಲೋಕಾಯುಕ್ತ ದಾಳಿ ಆದಾಗ ನಾನು ಚನ್ನಗಿರಿಯಲ್ಲಿದ್ದೆ. ಆದರೂ ನನ್ನ ಆರೋಪಿ ನಂಬರ್ ಓನ್ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನನಗೆ ಜನರಿಂದ ಬೆಂಬಲ ವ್ಯಕ್ತವಾಯಿತು. ಇದನ್ನು ಸಹಿಸದ ಕೆಲವರು ಕುತಂತ್ರ ಮಾಡಿ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿದರು. ನನ್ನ ವಿರುದ್ಧ ಬೇಕಾದಷ್ಟು ಪಿತೂರಿ ಮಾಡಲಿ. ನಾವು ಚುನಾವಣೆ ಬೇಡ ಎಂದು ಮನೆಯಲ್ಲಿ ಕುಳಿತಾಗ ಜನರೇ ನನ್ನ ಪುತ್ರ ಮಾಡಾಳ್ ಮಲ್ಲಿಕಾರ್ಜುನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ನನ್ನ ಮಗ ಗೆಲ್ಲುತ್ತಾನೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು
ಕೆಎಸ್ ಡಿಎಲ್ (KSDL) ಟೆಂಡರ್ ಹಗರಣದ ಆರೋಪದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಮಗ ಸಿಕ್ಕಿಬಿದ್ದಿದ್ದರು. ಅಲ್ಲದೆ 8 ಕೋಟಿಗೂ ಅಧಿಕ ನಗದು ಪತ್ತೆಯಾಗಿತ್ತು.
ಪುತ್ರ ಪ್ರಶಾಂತ್ ನ್ಯಾಯಾಂಗ ಬಂಧನ
ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್, ಅವರ ಖಾಸಗಿ ಕಚೇರಿಯ ಅಕೌಂಟೆಂಟ್ ಸುರೇಂದ್ರ, ಚಿತ್ರದುರ್ಗದ ಭೀಮಸಂದ್ರ ನಿವಾಸಿ ಸಿದ್ದೇಶ್, ಬೆಂಗಳೂರಿನ ಕರ್ನಾಟಕ ಅರೋಮಾಸ್ ಕಂಪನಿಯ ನೌಕರರಾದ ಆಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ ಅವರನ್ನು ಕೆಎಸ್‌ಡಿಎಲ್ ಕಚ್ಚಾವಸ್ತು ಪೂರೈಕೆಯಲ್ಲಿನ ಲಂಚ ಪ್ರಕರಣದಲ್ಲಿ ಮಾರ್ಚ್ 2ರಂದು ಬಂಧಿಸಲಾಗಿತ್ತು. ಅವರೆಲ್ಲರೂ ಈವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.