Sunday, December 22, 2024

ಮಲ್ಲೇಶ್ವರ ಕ್ಷೇತ್ರದಲ್ಲಿ ಅಶ್ವತ್ಥನಾರಾಯಣ ಬೈಕ್‌ ರ್ಯಾಲಿ

ಬೆಂಗಳೂರು : ಸಚಿವ ಹಾಗೂ ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಇಂದು ಬೆಳಿಗ್ಗೆ ವಾರ್ಡ್ ನಂಬರ್ 35, 36 ಮತ್ತು 45ರ ವ್ಯಾಪ್ತಿಯಲ್ಲಿ ಬೈಕ್‌ ರ್ಯಾಲಿ ನಡೆಸಿದರು.

ನ್ಯೂ ಬಿಎಎಲ್ ರಸ್ತೆಯ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ, ಬೈಕ್‌ ರ್ಯಾಲಿಗೆ ಚಾಲನೆ ನೀಡಿದ ಅವರು, ರೋಡ್‌ಶೋ ಮಾದರಿಯಲ್ಲಿ ತೆರಳುವ ಮೂಲಕ ಮತ ಕೋರಿದರು.

ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೈಕ್‌ಗಳಲ್ಲಿ ತೆರಳುತ್ತ, ಪ್ರಚಾರಕ್ಕೆ ರಂಗು ತಂದರು. ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಕಟ್ಟಡಗಳ ಮೇಲೆ ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ರು. ನೂರಾರು ಮಹಿಳೆಯರು ಸರದಿಯಲ್ಲಿ ಬಂದು, ಅಶ್ವತ್ಥನಾರಾಯಣ ಅವರಿಗೆ ಹರಸಿ, ಆಶೀರ್ವದಿಸಿದರು.

ಇದನ್ನೂ ಓದಿ : ಬಿಜೆಪಿ ‘ಕುಟುಂಬ ರಾಜಕಾರಣ’ದ ವಿರುದ್ಧವಾಗಿದೆ : ಸಚಿವ ಅಶ್ವತ್ಥನಾರಾಯಣ

ಎಲ್ಲೆಲ್ಲಿ ಬೈಕ್ ರ್ಯಾಲಿ

ಬೈಕ್‌ ರ್ಯಾಲಿಯು ಚಿಕ್ಕಮಾರನಹಳ್ಳಿ, ದೇವಸಂದ್ರ, ಜಲದರ್ಶಿನಿ ಲೇಔಟ್‌, ಏಜೀಸ್‌ ಲೇಔಟ್‌, ಎಂ.ಎಸ್‌.ರಾಮಯ್ಯ ನಗರ, ಹೊಸ ಬಿಎಎಲ್ ರಸ್ತೆ, ಸಂಜೀವಪ್ಪ ಕಾಲೋನಿ, ಜಯರಾಂ ಕಾಲೋನಿ ಮತ್ತಿಕೆರೆ ಬಳಿಕ ಯಶವಂತಪುರ ವೃತ್ತದಲ್ಲಿ ಕೊನೆಗೊಂಡಿತು. ಈ ವೇಳೆ ಬಿಜೆಪಿ ಸ್ಥಳೀಯ ಮುಖಂಡರಾದ ಜೈಪಾಲ್‌, ಡಾ.ವಾಸು ಮತ್ತು ಸುರೇಶ್‌ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮಾದರಿ ಮಲ್ಲೇಶ್ವರ ನಿರ್ಮಾಣ

ಈ ವೇಳೆ ಮಾತನಾಡಿದ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಅಭಿವೃದ್ಧಿ ವೇಗ ಪಡೆಯುತ್ತದೆ ಎನ್ನುವುದಕ್ಕೆ ಡಬಲ್ ಇಂಜಿನ್ ಸರ್ಕಾರದಡಿ ರಾಜ್ಯದ ಅಭಿವೃದ್ಧಿ ಡಬಲ್‌ ವೇಗದಲ್ಲಿ ಸಾಗುತ್ತಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಮಾದರಿ ಮಲ್ಲೇಶ್ವರ ನಿರ್ಮಾಣಕ್ಕಾಗಿ ನಿರಂತರವಾಗಿ ನನ್ನ ಬೆನ್ನೆಲುಬಾಗಿ ನಿಂತಿರುವ ಕ್ಷೇತ್ರದ ಜನತೆ ಈ ಬಾರಿಯೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಭರವಸೆ ನೀಡಿದ್ದಾರೆ. ರಾಜ್ಯದಾದ್ಯಂತ ಬಿಜೆಪಿಯ ಪರವಾದ ವಾತಾವರಣ ಸೃಷ್ಟಿಯಾಗಿದ್ದು, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಜನತೆ ತೀರ್ಮಾನಿಸಿದ್ದಾರೆ.

RELATED ARTICLES

Related Articles

TRENDING ARTICLES