ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಇಂದು ಮಂಗಳೂರಿನಲ್ಲಿ ಮತ ಭೇಟೆ ನಡೆಸಲಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಪರ ಎಚ್.ಡಿ ದೇವೇಗೌಡ ಅವರು ಪ್ರಚಾರ ನಡೆಸಿ, ಮತಯಾಚಿಸಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಲಿರುವ ಎಚ್.ಡಿ ದೇವೇಗೌಡರು, ಮಧ್ಯಾಹ್ನ 2.30ಕ್ಕೆ ಸುರತ್ಕಲ್ನಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಮಂಗಳೂರಿನ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ಭೇಟಿ, ಪೂಜೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ : ಸಮೃದ್ಧಿ ಮಂಜುನಾಥ್ ಗೆಲುವಿಗೆ ಪತ್ನಿ ಪದ್ಮ ಪ್ರಾರ್ಥನೆ
ಬಳಿಕ ಸಂಜೆ 4 ಗಂಟೆಗೆ ಎಚ್.ಡಿ ದೇವೇಗೌಡ ಅವರು ಬಲವಂಡಿ ದೈವಸ್ಥಾನಕ್ಕೆ ಭೇಟಿ ನೀಡಿ, ಬಳಿಕ ಗುರುಪುರ ಕಂಬಳ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಭಾಷಣ ಮಾಡಲಿದ್ದಾರೆ. ಮಂಗಳೂರು ಉತ್ತರ ಜೆ.ಡಿ.ಎಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಪರ ಪ್ರಚಾರ ಸಮಾವೇಶ ನಡೆಸಿ, ಬಳಿಕ ಬೆಂಗಳೂರಿಗೆ ವಾಪಸ್ ಮರಳಲಿದ್ದಾರೆ.
ಬಿಜೆಪಿಯಿಂದ ರೈತರಿಗೆ ದ್ರೋಹ
ರೈತರಿಗೆ ದ್ರೋಹ ಮಾಡಿರುವ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಯಾವುದೇ ಆಸೆ ಆಮಿಷೆಗಳಿಗೆ ಬಲಿಯಾಗದೇ ಈ ಬಾರಿ ಜೆಡಿಎಸ್ ಗೆ ಬೆಂಬಲ ನೀಡಿ. ನೀವು ಬಿಜೆಪಿಗೆ ಬೆಂಬಲ ಕೊಡದೇ ಈ ಬಾರಿ ತಕ್ಕ ಪಾಠ ಕಲಿಸಿ. ಸೋಮನಗೌಡ ಪಾಟೀಲ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.