ಬೆಂಗಳೂರು : ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ 55 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಒದಗಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನಪರ ಆಡಳಿತ ನೀಡಿರುವ ಬಿಜೆಪಿಯು ಜನಾಶೀರ್ವಾದ ಪಡೆದು ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾರಂಟಿ ಮುಗಿದಿರುವ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಶೇ.100 ರಷ್ಟು ಖಚಿತವಾಗಿದೆ. ಇದು ಅರಿವಾದಂತೆ ಕೈ ನಾಯಕರು ಸುಳ್ಳಿನ ಗ್ಯಾರಂಟಿಗಳನ್ನು ನೀಡಲು ಆರಂಭಿಸಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಈಗಾಗಲೇ ಅಭಿವೃದ್ಧಿಯ ಗ್ಯಾರೆಂಟಿಯನ್ನು ಜನತೆಗೆ ನೀಡಿದೆ ಎಂದು ಕುಟುಕಿದ್ದಾರೆ.
ನಮ್ಮ ಕರ್ನಾಟಕವನ್ನು ಆವಿಷ್ಕಾರ, ನವೋದ್ಯಮ ಹಾಗೂ ತಂತ್ರಜ್ಞಾನ ವಲಯದಲ್ಲಿ ದೇಶದ ಅಗ್ರಗಣ್ಯ ರಾಜ್ಯವನ್ನಾಗಿ ರೂಪಿಸಲು ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಯಶಸ್ವಿಯಾಗಿದೆ. 2013 ರಿಂದ 2018ರ ಅವಧಿಯಲ್ಲಿ ‘ದೇಶದ ಮೂರನೇ ಅಸುರಕ್ಷಿತ ನಗರ’, ‘ಕರ್ನಾಟಕದಿಂದ ಇತರ ನಗರಗಳಿಗೆ ಹೂಡಿಕೆದಾರರ ವಲಸೆ’ ಎಂಬ ಶೀರ್ಷಿಕೆಗಳ ವರದಿಗಳು ಪ್ರಕಟವಾಗುತ್ತಿದ್ದವು ಎಂದಿದ್ದಾರೆ.
3.21 ಲಕ್ಷ ಕೋಟಿ ಹೂಡಿಕೆ
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹೂಡಿಕೆ ಆಕರ್ಷಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದೇವೆ. 2013ರಿಂದ 18ರ ವರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಕೇವಲ 1.29 ಲಕ್ಷ ಕೋಟಿಯಾಗಿತ್ತು. ಆದರೆ, ಬಿಜೆಪಿ ಸರ್ಕಾರ ಬಂದಮೇಲೆ ಅಕ್ಟೋಬರ್ 2019 ರಿಂದ 2022 ಅಂತ್ಯದವರೆಗೆ 3.21 ಲಕ್ಷ ಕೋಟಿ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಡಿಕೆಶಿ ನೋಡಿದ್ರೆ ಯಾರು ವೋಟ್ ಹಾಕುತ್ತಾರೆ : ಅಶ್ವತ್ಥನಾರಾಯಣ ಲೇವಡಿ
Top Achiever ಪ್ರಶಸ್ತಿ
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರ 3.02 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯವಾಗಿದ್ದರೆ ಬಿಜೆಪಿ ಸರ್ಕಾರದಡಿ ಮೂರುಪಟ್ಟು ಹೆಚ್ಚು ಅಂದರೆ 9.8 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲು ಯಶಸ್ವಿಯಾಗಿದ್ದೇವೆ. 2018-19ನೇ ಸಾಲಿನಲ್ಲಿ Ease of Doing Business Rankingನಲ್ಲಿ 17ನೇ ಸ್ಥಾನದಲ್ಲಿದ್ದ ಕರ್ನಾಟಕ 2021ರಲ್ಲಿ Top Achiever ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿಯೂ ಐಟಿ ಉದ್ಯಮವನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಿದ್ದೇವೆ. ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಿದ್ದು, ಕಳೆದ 4 ವರ್ಷಗಳಲ್ಲಿ 55 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಒದಗಿಸಲಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್‌ಗಳಲ್ಲಿ 10 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವಲ್ಲಿ ನಮ್ಮ ಸರ್ಕಾರ ಸಫಲವಾಗಿದೆ ಎಂದು ಹೇಳಿದ್ದಾರೆ.