Monday, December 23, 2024

‘ವಿಘ್ನ ಸಂತೋಷಿ’ಗಳೇ ಯಡಿಯೂರಪ್ಪರನ್ನು ಜೈಲಿಗೆ ಕಳಿಸಿದ್ದು : ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ನೆಲೆಯೇ ಇಲ್ಲದಿದ್ದ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಲಿಂಗಾಯತ ನಾಯಕ ಬಿ.ಎಸ್ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ‘ವಿಘ್ನ ಸಂತೋಷಿ’ಗಳೇ ಹೊರತು, ಕಾಂಗ್ರೆಸ್ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿರುವ ಲಿಂಗಾಯತ ಸಮುದಾಯದ ನಾಯಕರನ್ನು ನೋಡಿದಾಗ ‘ ಹಾವಿನ ಹೆಡೆಯ ಮೇಲಿನ ಕಪ್ಪೆ  ಹಾರುವ ನೊಣಕ್ಕೆ ಆಶಿಸಿದಂತೆ’ ಎಂಬ ಬಸವಣ್ಣನವರ ವಚನ ನೆನಪಾಗುತ್ತಿದೆ ಎಂದು ಕುಟುಕಿದ್ದಾರೆ.

ರಾಜಕೀಯವಾಗಿ ತಮ್ಮನ್ನು ಮುಗಿಸಲು ಆರ್.ಎಸ್.ಎಸ್ ‘ವಿಘ್ನಸಂತೋಷಿ’ಗಳು ಮಾಡುತ್ತಿರುವ ಸಂಚನ್ನು ಅರಿಯದ ಬಿಜೆಪಿಯ ಲಿಂಗಾಯತ ನಾಯಕರು, ಕಾಂಗ್ರೆಸ್ ಲಿಂಗಾಯತ ವಿರೋಧಿ ಎಂಬ ಸುಳ್ಳು ಆರೋಪ ಮಾಡುತ್ತಾ ಕಾಲ ಕಳೆಯುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ‘ಎಂ.ಬಿ ಪಾಟೀಲ್ ಸಿಎಂ’ ಆದ್ರೆ ಒಳ್ಳೆಯದು : ಯತ್ನಾಳ್ ಸಾಫ್ಟ್ ಕಾರ್ನರ್

ಶೆಟ್ಟರ್ ಮುಗಿಸುವ ಹುನ್ನಾರ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜಕೀಯ ಜೀವನವನ್ನು ಮುಗಿಸುವ ಹುನ್ನಾರದ ರೂವಾರಿಗಳು ಸಹ ಇದೇ ‘ವಿಘ್ನ ಸಂತೋಷಿ’ಗಳು. ಕಾಂಗ್ರೆಸ್ ಅಲ್ಲ. ಗೆಲ್ಲುವ ಅವಕಾಶವೇ ಇಲ್ಲದ ವರುಣಾ ಕ್ಷೇತ್ರದಲ್ಲಿ ಒಲ್ಲೆ ಎಂದರೂ ಬಲವಂತವಾಗಿ ವಿ.ಸೋಮಣ್ಣನನ್ನು ಅಭ್ಯರ್ಥಿ ಮಾಡಿದ್ದು ಕೂಡಾ ಇವರೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಿಂಗಾಯತರೇ ಸೋತ ಹಾಗೆ

ಲಕ್ಷ್ಮಣ ಸವದಿ, ಸೊಗಡು ಶಿವಣ್ಣ, ಸಂಜಯ್ ಪಾಟೀಲ್ ಮೊದಲಾದ ಲಿಂಗಾಯತ ನಾಯಕರಿಗೆ ಟಿಕೆಟ್ ನಿರಾಕರಿಸಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದು ಕೂಡಾ ಇದೇ ‘ವಿಘ್ನ ಸಂತೋಷಿ’ಗಳು. ಈಗ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಹೊಣೆಯನ್ನು ಕೂಡಾ ಬಿ.ಎಸ್.ಯಡಿಯೂರಪ್ಪನವರ ಮೇಲೆ ಹೊರಿಸಲಾಗಿದೆ. ಇವರಲ್ಲಿ ಯಾರೂ ಸೋತರೂ ಒಬ್ಬ ಲಿಂಗಾಯತ ನಾಯಕರು ಸೋತ ಹಾಗೆ ಅಲ್ಲವೇ? ಎಂದು ಮಾರ್ಮಿಕವಾಗಿ ಕುಟುಕಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ಲಿಂಗಾಯತ ನಾಯಕರು ಆರೋಪ ಮಾಡುವುದನ್ನು ನಿಲ್ಲಿಸಿ ತಮ್ಮ ನಿಜವಾದ ಶತ್ರುಗಳನ್ನು ಗುರುತಿಸಿ, ಅವರ ಮೇಲೆ ಹೋರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES