ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಮ್ಮಪಕ್ಷದ ಶಿಸ್ತಿನ ಸಿಫಾಯಿ. ಅವರು ಯಾಕೆ ಯಡಿಯೂರಪ್ಪನವರನ್ನುಮುಗಿಸುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಪವರ್ ಟಿವಿ ಜೊತೆ ಮಾತನಾಡಿರುವ ಅವರು, ಹಾಗೆ ನೋಡಿದ್ರೆ ಸಿದ್ದರಾಮಯ್ಯ ಅವರನ್ನು ಮುಗಿಸಲು ಹೋಗಿದ್ದು ಯಾರು? ಮೊದಲು ಡಿ.ಕೆ ಶಿವಕುಮಾರ್ ತಮ್ಮಪಕ್ಷದ ಬಗ್ಗೆ ನೋಡಿಕೊಳ್ಳಲಿ. ನಮ್ಮಪಕ್ಷದ ಉಸಾಬರಿ ಅವರಿಗೆ ಬೇಕಾಗಿಲ್ಲ ಎಂದು ಕುಟುಕಿದ್ದಾರೆ.
ಲಿಂಗಾಯಿತರ ವಿಷಯದಲ್ಲಿ ಮಾತನಾಡುವಾಗ ಬಿಜೆಪಿಯಲ್ಲಿ ಅಣೆಕಟ್ಟೆ ಕೆರೆ ಕಟ್ಟೆಗಳೆಲ್ಲಾ ಇವೆ. ಆದರೆ, ಕಾಂಗ್ರೆಸ್ ನಲ್ಲಿ ಏನಿದೆ? ಹೇಳೋರು ಇಲ್ಲ, ಕೇಳೋರು ಇಲ್ಲ. ಕನಕಪುರದಲ್ಲಿ ನರೇಂದ್ರ ಮೋದಿ ಅಂಡ್ ಆರ್.ಅಶೋಕ್ ಸರ್ಕಾರ ಬೇಕೋ, ರಾಹುಲ್ ಗಾಂಧಿ ಅಂಡ್ ಡಿ.ಕೆ.ಶಿವಕುಮಾರ್ ಸರ್ಕಾರ ಬೇಕೋ ಅಂತಾ ಜನ ತೀರ್ಮಾನ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೆಲ್ಲಾ ಕಾಂಗ್ರೆಸ್ ಪಕ್ಷದ ಚಾಳಿ
ಡಿ.ಕೆ.ಶಿವಕುಮಾರ್ ಅವರು ಚುನಾವಣಾಧಿಕಾರಿಗಳ ಮೇಲೆ ಆರೋಪಮಾಡಿದ್ದಾರೆ. ಮೊದಲು ತಮ್ಮ ಆರೋಪಕ್ಕೆ ಅವರು ಸೂಕ್ತ ದಾಖಲೆಗಳನ್ನು ಜನರ ಮುಂದೆ ಇಡಲಿ. ಬಿಜೆಪಿ ಎಂದೂ ಸಹ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ಪಕ್ಷದ ಚಾಳಿ. ಇದೀಗ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ನೇರ ಆರೋಪ ಮಾಡಿದ್ದಾರೆ. ಹಾಗಾಗಿ, ಚುನಾವಣಾ ಆಯೋಗ ಡಿ.ಕೆ.ಶಿವಕುಮಾರ್ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ‘ಸವಾಲು ಸ್ವೀಕರಿಸಿದ್ದೇವೆ’ : ಡಿಕೆಶಿ ವಿರುದ್ಧ ಬೊಮ್ಮಾಯಿ ಟ್ವಿಟಾಸ್ತ್ರ
ಡಿಕೆಶಿ ಮೇಲೆ ವೈಯಕ್ತಿಕ ದ್ವೇಷವಿಲ್ಲ
ಚುನಾವಣೆ ಅನ್ನೋದು ಒಂದು ಯುದ್ದ. ಸಹಜವಾಗಿಯೇ ನಮ್ಮ ಕಾನೂನು ಘಟಕ ಅವರ ನಾಮಪತ್ರದ ಸಿಂಧುತ್ವಕ್ಕೆ ಆಕ್ಷೇಪಣೆ ಸಲ್ಲಿಸಿದೆ. ನನಗೆ ಡಿ.ಕೆ.ಶಿವಕುಮಾರ್ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ವರಿಷ್ಠರ ಆದೇಶ ಪಾಲನೆ ಮಾಡಿ ಸ್ಪರ್ಧೆ ಮಾಡಿದ್ದೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ನವರು ಈಗ ನನ್ನ ನಾಮಪತ್ರಕ್ಕೂ ಆಕ್ಷೇಪಣೆ ಸಲ್ಲಿಸಿದ್ದಾರೆ. ಅದಕ್ಕೆ ನಾವು ಕಾನೂನು ಪ್ರಕಾರವೇ ಉತ್ತರ ಕೊಡುತ್ತೇವೆ. ಮೇಲಾಗಿ ಅವರ ನಾಮಪತ್ರದ ದಾಖಲೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಡೌನ್ ಲೋಡ್ ಮಾಡಿಕೊಂಡಿರೋದು ಕಾಂಗ್ರೆಸ್ಸಿಗರೇ ಹೊರತು ನಾವಲ್ಲ. ನಮಗೆ ಒಂದು ಕಾಪಿ ಸಾಕು. ಲೋಪದೋಷಗಳನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ.