Sunday, January 19, 2025

ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ : ಇಂದು ಯಾರೆಲ್ಲಾ ನಾಮಪತ್ರ ಸಲ್ಲಿಸಿದ್ರು ಗೊತ್ತಾ

ಬೆಂಗಳೂರು : ರಾಜ್ಯಾದ್ಯಂತ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಬೃಹತ್​​ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್​ವೈ ಪುತ್ರ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಪಕ್ಷಗಳ ಪ್ರಮುಖ ನಾಯಕರು ಅಬ್ಬರದ ರೋಡ್​ ಶೋ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಾಲು ಸಾಲಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೊರಟಗೆರೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಅಭಿಮಾನಿಗಳು ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆ ಮೂಲಕ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಮೆರವಣಿಗೆ ಮೂಲಕ ತಹಶೀಲ್ದಾರರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಇನ್ನು ಗಂಗಾವತಿಯ ಬಿಜೆಪಿ ಟಿಕೆಟ್ ಈ ಬಾರಿಯೂ ಶಾಸಕ ಪರಣ್ಣ ಮನವಳ್ಳಿಗೆ ಒಲಿದು ಬಂದಿದೆ. ಇಂದು ತಮ್ಮ ಬೆಂಬಲಿಗರೊಂದಿಗೆ ಪರಣ್ಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಿನೇಷನ್​ ಕಾರ್ಯಕ್ರಮಕ್ಕೆ ಪರಣ್ಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಶಾಸಕ ಪರಣ್ಣಗೆ ಅಭಿಮಾನಿಗಳು ನಗರದ ತಹಶೀಲ್ದಾರರ ಆವರಣದ ಹೊರಗಡೆ ಹಾಲಿನ ಅಭಿಷೇಕ ಮಾಡಿದರು.

ಇದನ್ನೂ ಓದಿ : ಕೆನ್ನೆ ಹಿಂಡಿದ ಯಡಿಯೂರಪ್ಪ, ಮುಗುಳ್ನಕ್ಕ ನಟಿ ಶೃತಿ

ಇನ್ನು ಕೊಪ್ಪಳದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ  ನಾಮಪತ್ರ ಸಲ್ಲಿಕೆಯ ಬಳಿಕ ಬೃಹತ್ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಎ.ಎಸ್ ಪಾಟೀಲ್ ನಡಹಳ್ಳಿ ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುಂಚೆ ನಾಮಿನೇಷನ್​ ರ್ಯಾಲಿ ಆಯೋಜನೆ ಮಾಡಿದ್ರು, 50 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದರು.

ಬೊಮ್ಮನಹಳ್ಳಿ ಜೆಡಿಎಸ್ ಅಭ್ಯರ್ಥಿ ನಾರಾಯಣ ರಾಜು ನಾಮಪತ್ರ ಸಲ್ಲಿಸಿದ್ದಾರೆ. ಯಾವುದೇ ಮೆರವಣಿಗೆ ಇಲ್ಲದೆ ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾರಾಯಣ ರಾಜುಗೆ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಹಾಗೂ ಬೆಂಬಲಿಗರು ಸಾಥ್​ ನೀಡಿದರು. ಇನ್ನು ಮುಳಬಾಗಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಮೃದ್ದಿ ಮಂಜುನಾಥ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ನಗರದಲ್ಲಿ ನಾಮಿನೇಷನ್​ ರ್ಯಾಲಿ ಆಯೋಜನೆ ಮಾಡಿದರು. ಇನ್ನೊಂದೆಡೆ ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆ ಬಳಿಕ ನಗರದಲ್ಲಿ ಮೆರವಣಿಗೆ ಮಾಡಿದರು. ಈ ವೇಳೆ ರಘು ಆಚಾರ್​ಗೆ ಅಪಾರ ಬೆಂಬಲಿಗರು ಸಾಥ್​ ನೀಡಿದರು.

ಹೊಸದುರ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ನಾಳೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಒಟ್ಟಾರೆ, ಕದನ ಕಲಿಗಳು ಚುನಾವಣೆ ಸ್ಫರ್ಧೆಗೆ ಸಜ್ಜಾಗಿದ್ದು ಇಂದು ತಮ್ಮ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES