ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನದ ಗುರಿ ಹೊಂದಿರುವ ಬಿಬಿಎಂಪಿಯು ವಿನೂತನವಾಗಿ ವೋಟ್-ಎ-ಥಾನ್ (VOTE-A-THON) ಸ್ಪರ್ಧೆಯನ್ನು ಆಯೋಜಿಸಿದೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು, ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಬಿಡುಗಡೆ ಮಾಡುವ ವೋಟ್-ಎ-ಥಾನ್ ಸ್ಪರ್ಧೆ ಗೆ ಚಾಲನೆ ನೀಡಿ ಮಾತನಾಡಿದ್ದಾರೆ.
ವೋಟ್-ಎ-ಥಾನ್ ಸ್ಪರ್ಧೆಯು ಬೆಂಗಳೂರು ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17 ರಿಂದ ಏಪ್ರಿಲ್ 30 ರವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಾಗೂ ಪಾಲಿಕೆ ವತಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದೀಗ ವೋಟ್-ಎ-ಥಾನ್ ಎಂಬ ವಿನೂತನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ : ಶಿವಮೊಗ್ಗ ಟಿಕೆಟ್ ಹೋಲ್ಡ್
ಭಾಗವಹಿಸುವುದು ಹೇಗೆ?
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕ್ರಿಯಾತ್ಮಕ ಆಲೋಚನೆಗಳ ಮೂಲಕ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡಿ ಹ್ಯಾಶ್ ಟ್ಯಾಗ್(#Vote-A-Thon) ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಥವಾ ಇ-ಮೇಲ್ ಐಡಿ contact-us@bbmp.gov.inಗೆ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಮಾಡಿರುವವರು ಏಪ್ರಿಲ್ 30 ರೊಳಗಾಗಿ ಕಳುಹಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಮತದಾನ ಬಗ್ಗೆ ಜಾಗೃತಿ
ಕ್ರಿಯಾತ್ಮಕವಾಗಿ ರಚಿಸಿದ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳಿಗೆ ನಗದು ಬಹುಮಾನ, ಪ್ರಮಾಣ ಮತ್ರ ಹಾಗೂ ಇನ್ನಿತ್ಯಾದಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು. ವೊಟ್-ಎ-ಥಾನ್ ಸ್ಪರ್ಧೆಯ ಮೂಲಕ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಲ್ಲಿ ಉತ್ಸಾಹವನ್ನು ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.