Wednesday, January 22, 2025

ಹರೀಶ್ ಪೂಂಜ ಶಕ್ತಿ ಪ್ರದರ್ಶನ : ರೋಡ್ ಶೋನಲ್ಲಿ 50 ಸಾವಿರಕ್ಕೂ ಹೆಚ್ಚು ಕೇಸರಿ ಕಾರ್ಯಕರ್ತರು ಭಾಗಿ

ಬೆಂಗಳೂರು : ಕರಾವಳಿಯ ಬೆಳ್ತಂಗಡಿಯಲ್ಲಿ ಚುನಾವಣೆ ಫಲಿತಾಂಶದ ಮೊದಲೇ ಕೇಸರಿ ಪಾಳಯದ ಜೈಕಾರ ಮೊಳಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪರವಾಗಿ ಸಾವಿರಾರು ಕಾರ್ಯಕರ್ತರು ಸೇರಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.‌ ಇದೇ ವೇಳೆ, ಪುತ್ತೂರಿನಲ್ಲೂ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಪುತ್ತಿಲ ಪರವಾಗಿ ಕೇಸರಿ ಕಾರ್ಯಕರ್ತರು ಪಕ್ಷದ ನಾಯಕರ ವಿರುದ್ಧವೇ ತೊಡೆತಟ್ಟಿದ್ದಾರೆ.

ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಕೇಸರಿ ಕಲರವ ಮಾರ್ದನಿಸಿದೆ. ಮಹಿಳೆಯರು, ಪುರುಷರು, ಮಕ್ಕಳು ಎಂಬ ಭೇದ ಇಲ್ಲದೆ ಕೇಸರಿ ಕಾರ್ಯಕರ್ತರು ಜಯಘೋಷ ಹಾಕಿದ್ದಾರೆ.‌ 50 ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ಚುನಾವಣೆಗೆ ಮೊದಲೇ ಬಿಜೆಪಿಗೆ ಜೈಕಾರ ಹಾಕಿದ್ದಾರೆ.

ಸೋಮನಾಥೇಶ್ವರನಿಗೆ ವಿಶೇಷ ಪೂಜೆ

ಬಿಜೆಪಿಯಿಂದ ಹಾಲಿ ಶಾಸಕ ಹರೀಶ್ ಪೂಂಜ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದು ಭಾರೀ ಸಂಖ್ಯೆಯ ಕಾರ್ಯಕರ್ತರ ನಡುವೆ ಅದ್ಧೂರಿ ರೋಡ್ ಶೋ ನಡೆಸಿದರು. ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಅಲ್ಲಿಂದ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಜೊತೆಗೆ ಹರೀಶ್ ಪೂಂಜಾ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಹರೀಶ್ ಪೂಂಜಾ ಪರ ಜೈಕಾರ ಮೊಳಗಿತ್ತು. ಕೇಸರಿ ಶಾಲು ಹಾಕಿದ ಮಹಿಳೆಯರು, ಯುವಕರ ಝೇಂಕಾರ, ಕೇಸರಿ ಬಾವುಟದ ಹಾರಾಟ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತ್ತು.

ಇದನ್ನೂ ಓದಿ : ನಾಳೆ ದೊಡ್ಡಬಳ್ಳಾಪುರ ಅಭ್ಯರ್ಥಿ ಧೀರಜ್ ಮುನಿರಾಜು ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ ವಿಧಾನಸೌಧ ಕಚೇರಿಯಲ್ಲಿ ಬಿಗಿ ಬಂದೋಬಸ್ತ್ ನಡುವೆ ಹರೀಶ್ ಪೂಂಜ ನಾಮಪತ್ರ ಸಲ್ಲಿಸಿದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ದೇವರ ಆಶೀರ್ವಾದ. ಜನರು ಅವಕಾಶ ಕೊಟ್ಟಿದ್ದಾರೆ. ಇದನ್ನು ಸದ್ಬಳಕೆ ಮಾಡಿದ್ದೇನೆ ಎಂದು ಇದೇ ವೇಳೆ ಹರೀಶ್ ಪೂಂಜ ಹೇಳಿದರು.

ಇನ್ನು ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುವ ಕರಾವಳಿ ಭಾಗದಲ್ಲಿ ಭಾರೀ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವ ಶಾಸಕ ಹರೀಶ್ ಪೂಂಜಾ ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಪಕ್ಷದ ರಾಜ್ಯ ನಾಯಕರಿಗಿಂತ ಮಿಗಿಲಾಗಿ ನೇರವಾಗಿಯೇ ಕೇಂದ್ರ ನಾಯಕರ ಜೊತೆ ಹರೀಶ್ ಪೂಂಜಾ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಪ್ರಧಾನಿ ಮೋದಿ ಜೊತೆ ಉತ್ತಮ ಬಾಂಧವ್ಯ

ಇದಕ್ಕೂ ಮಿಗಿಲಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಹರೀಶ್ ಪೂಂಜಾ ಅವರು ಅತ್ಯುತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹರೀಶ್ ಪೂಂಜಾ ಅವರ ನಾಯಕತ್ವ ಗುಣ, ಪಕ್ಷದಲ್ಲಿ ಸಂಘಟನಾ ಚಾತುರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಪ್ರಧಾನಿ ಮೋದಿ ಕೂಡ ಫಿದಾ ಆಗಿದ್ದಾರೆ. ತಮಗೆ ಹೋದಲ್ಲೆಲ್ಲಾ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿರುವುದಕ್ಕೆ ಶಾಸಕ ಹರೀಶ್ ಪೂಂಜಾ ಭಾರೀ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕರಾವಳಿಯಲ್ಲಿ ಮತದಾನಕ್ಕೆ ಇಪ್ಪತ್ತು ದಿನ ಇರುವಾಗಲೇ ಚುನಾವಣೆ ರಂಗೇರತೊಡಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಜನಮನ್ನಣೆ ಗಳಿಸಿರುವ ಹರೀಶ್ ಪೂಂಜಾಗೆ ಈ ಬಾರಿಯೂ ಕ್ಷೇತ್ರದೆಲ್ಲೆಡೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES