Wednesday, January 22, 2025

ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಅಶ್ವತ್ಥನಾರಾಯಣ ನಾಮಪತ್ರ ಸಲ್ಲಿಕೆ

ಬೆಂಗಳೂರು: ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಮಲ್ಲೇಶ್ವರದ ಮಾರಮ್ಮ ಸರ್ಕಲ್‌ನಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರೊಂದಿಗೆ ಹೊರಟ ಅವರು, 18ನೇ ಅಡ್ಡರಸ್ತೆಯಲ್ಲಿರುವ ಗೋಕಾಕ್‌ ಚಳವಳಿ ಸ್ಮರಣಾರ್ಥ ಉದ್ಯಾನ, 18ನೇ ಅಡ್ಡರಸ್ತೆ ಮೂಲಕ ಚುನಾವಣಾಧಿಕಾರಿಗಳ ಕಚೇರಿ ಇರುವ ಜಲಮಂಡಳಿ ಕಚೇರಿಗೆ ಪಾದಯಾತ್ರೆ ಮೂಲಕ ಸಾಗಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾತಂಡಗಳು ತಮ್ಮ ಪ್ರದರ್ಶನದ ಮೂಲಕ ಮೆರುಗು ನೀಡಿ, ವರ್ಣರಂಜಿತ ವಾತಾವರಣವನ್ನು ಸೃಷ್ಟಿಸಿದ್ದವು.

ಇನ್ನೊಂದೆಡೆಯಲ್ಲಿ ಬಿಜೆಪಿ ಅಂಗವಸ್ತ್ರ ಹೊದ್ದು, ಪಕ್ಷದ ಬಾವುಟ ಹಿಡಿದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಜಯಘೋಷಗಳನ್ನು ಮೊಳಗಿಸಿ, ಸಂಭ್ರಮದ ಕಳೆ ತಂದರು.

ಇಷ್ಟೇ ಅಲ್ಲದೆ, ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಯದುಗಿರಿ ಯತಿರಾಜ ಮಠ, ಬಡಗನಾಡು ಬ್ರಾಹ್ಮಣ ಮಹಾಸಭಾ, ಸಿರಿನಾಡು ಬ್ರಾಹ್ಮಣ ಸಭಾ, ಅಕ್ಷಯ ಬ್ರಾಹ್ಮಣ ಸಭಾ, ಮಹಾತ್ಮ ಮಹಾಮಂಡಲ, ಮಾಧ್ವ ಮಹಾಮಂಡಲ, ವಿಪ್ರತ್ರಯ ಪರಿಷತ್‌, ಸುಧೀಂದ್ರ ನಗರದ ಮಾಧ್ವ ಸಂಘ ಮತ್ತು ಉಲಚಕಮ್ಮೆ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ನಾಮಪತ್ರದ ಜತೆ ಸಲ್ಲಿಸಬೇಕಾದ 10 ಸಾವಿರ ರೂ.ಗಳ ಠೇವಣಿ ಮೊತ್ತವನ್ನು ಅಶ್ವತ್ಥನಾರಾಯಣ ಅವರಿಗೆ ದೇಣಿಗೆಯಾಗಿ ಹಸ್ತಾಂತರಿಸಿದರು. ಇದೇ ಹಣವನ್ನು ಸಚಿವರು ನಾಮಪತ್ರದ ಜತೆ ಚುನಾವಣಾ ಅಧಿಕಾರಿಗಳಿಗೆ ಠೇವಣಿಯಾಗಿ‌ ನೀಡಿದರು.

 

ಇನ್ನೂ ಅಶ್ವತ್ಥನಾರಾಯಣ ಅವರ ಮಲ್ಲೇಶ್ವರದ ನಿವಾಸದಲ್ಲಿ ಬೆಳಿಗ್ಗೆ ವಿಶೇಷ ಹೋಮ ನೆರವೇರಿತು. ಇದಕ್ಕೂ ಮೊದಲು ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಾಲಾಂಜನೇಯ, ಗಂಗಮ್ಮ, ಲಕ್ಷ್ಮೀನರಸಿಂಹ, ಕಾಡು ಮಲ್ಲೇಶ್ವರ, ಕೋಡಿ ಆಂಜನೇಯ ಮತ್ತು ಮಹಾಗಣಪತಿ ದೇವಸ್ಥಾನಗಳಿಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಎಲ್ಲ ದೇಗುಲಗಳಲ್ಲೂ ಅರ್ಚಕರು ಸಚಿವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ನೀಡಿ, ಗೌರವಿಸಿದರು.

RELATED ARTICLES

Related Articles

TRENDING ARTICLES