Saturday, April 20, 2024

KGF 2ಗೆ ವರುಷ : ರಾಕಿಭಾಯ್ ‘ಉಡೀಸ್ ಮಾಡಿರೋ ದಾಖಲೆ’ಗಳೇನು ಗೊತ್ತಾ?

ಬೆಂಗಳೂರು : ನ್ಯಾಷನಲ್ ಸ್ಟಾರ್ ರಾಕಿಭಾಯ್ ಬ್ಯುಸಿನೆಸ್ ಶುರು ಮಾಡಿ ಇಂದಿಗೆ ವರ್ಷ. ಆದರೆ, ಅವರು ಮಾಡಿರೋ ರೆಕಾರ್ಡ್​ಗಳು ಇನ್ನೂ ನಿಂತೇ ಇಲ್ಲ. ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ತ್ರಿಮೂರ್ತಿಗಳು ತಮ್ಮ ತಾಕತ್ತಿನ ಜೊತೆ ಕನ್ನಡ ಚಿತ್ರರಂಗದ ಗತ್ತನ್ನು ಭಾರತೀಯ ಚಿತ್ರರಂಗಕ್ಕೆ ಗೊತ್ತು ಮಾಡಿದ ದಿನವಿದು. ಇಷ್ಟಕ್ಕೂ ಚಾಪ್ಟರ್ 2 ಬರೆದ ದಾಖಲೆಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.

ಮುಂಗಾರು ಮಳೆ ಚಿತ್ರದ ಬಳಿಕ ಕನ್ನಡದ ಸಿನಿಮಾಗಳು 50 ಕೋಟಿ ಕ್ಲಬ್ ಸೇರೋದು ಕೂಡ ಕಷ್ಟಸಾಧ್ಯವಾಗಿತ್ತು. ಆದರೆ, ಅದನ್ನು ಸಾಧ್ಯವಾಗಿಸಿದ್ದು ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾಗಳು. ಅದಾದ ಬಳಿಕ ಕನ್ನಡ ಸಿನಿಮಾಗಳು ಕೂಡ ತೆಲುಗು ಹಾಗೂ ಬಾಲಿವುಡ್ ಚಿತ್ರಗಳಂತೆ 100 ಕೋಟಿ, 200 ಕೋಟಿ ಗಳಿಸಬಲ್ಲವು ಅನ್ನೋದನ್ನು ತೋರಸಿಕೊಟ್ಟಿದ್ದೇ ಕೆಜಿಎಫ್ ಚಾಪ್ಟರ್-1.

1,250 ಕೋಟಿ ಬಾಕ್ಸ್ ಆಫೀಸ್ ಬ್ಯಾಂಗ್

ಯೆಸ್, ಉಗ್ರಂ ಪ್ರಶಾಂತ್ ನೀಲ್ ನಿರ್ದೇಶನಾ ಕೌಶಲ್ಯಗಳು, ಹೊಂಬಾಳೆ ಫಿಲಂಸ್ ಮೇಕಿಂಗ್ ಸ್ಟ್ಯಾಂಡರ್ಡ್ಸ್ ಹಾಗೂ ಯಶ್ ಟ್ಯಾಲೆಂಟ್​​ಗೆ ವೇದಿಕೆ ಆದ ಕೆಜಿಎಫ್, ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದು ಬರೋಬ್ಬರಿ 250 ಕೋಟಿ. ಯಾವಾಗ ಚಾಪ್ಟರ್ 1 ಆ ರೇಂಜ್​ಗೆ ಬ್ಯುಸಿನೆಸ್ ಮಾಡಿತೋ, ಚಾಪ್ಟರ್-2 ಮೇಲೆ ನಿರೀಕ್ಷೆಗಳ ಬೆಟ್ಟವೇ ಬೆಳೆಯಿತು. ಚಿತ್ರತಂಡದಲ್ಲಿ ಆ ನಿರೀಕ್ಷೆಗೆ ತಕ್ಕ ಪ್ರಾಡಕ್ಟ್​ನ ಕೊಡೋ ಕಿಚ್ಚು ಕೂಡ ಹುಟ್ಟಿತು. ಅದರಂತೆ ಕೆಜಿಎಫ್ ಚಾಪ್ಟರ್-2 ರಿಲೀಸ್ ಆಗಿ ಇಡೀ ಭಾರತೀಯರ ದಿಲ್ ದೋಚಿತು. 1,250 ಕೋಟಿ ರೂ. ಗಳಿಕೆಯಿಂದ ಬಾಕ್ಸ್ ಆಫೀಸ್ ಬ್ಯಾಂಗ್​ ಮಾಡಿತು.

ಇದನ್ನೂ ಓದಿ : ನೂರು ಕೋಟಿ ಕ್ಲಬ್ ಸೇರಿಗೆ ನಾನಿ ‘ದಸರಾ’ : ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್

ನ್ಯೂ ಪ್ರಾಜೆಕ್ಟ್ ಅನೌನ್ಸ್ ಯಾವಾಗ?

ರಾಕಿಭಾಯ್ ನಟನೆಯ ಕೆಜಿಎಫ್-2 ತೆರೆಕಂಡು ವರ್ಷ ಕಳೆಯಿತು. ಯಶ್ ಇಂದಿಗೂ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಆದರೆ, ಇತ್ತೀಚೆಗೆ ಶ್ರೀಲಂಕಾದಲ್ಲಿ ಕಾಣಿಸಿಕೊಂಡಿದ್ದು, ಇದು ಯಶ್ 19ನೇ ಚಿತ್ರದ ಲೊಕೇಷನ್ ಹಂಟ್​​ ಅಂತ ಬಿಂಬಿತಗೊಂಡಿದೆ. ಲಂಕಾದ ಯಾಲಾದಲ್ಲಿನ ಬೋರ್ಡ್​ ಆಫ್ ಇನ್ವೆಸ್ಟ್​​ಮೆಂಟ್ ಅಧ್ಯಕ್ಷ ದಿನೇಶ್ ವೀರಕ್ಕೋಡಿ ಜೊತೆಗಿನ ಯಶ್ ಫೋಟೋ ಸಖತ್ ವೈರಲ್ ಆಗ್ತಿದೆ. ಕೆಜಿಎಫ್ 2 ರಿಲೀಸ್ ಆಗಿ ವರ್ಷ ಆಗುತ್ತಿರೋ ಸಂಭ್ರಮದಲ್ಲಿ ನ್ಯೂ ಪ್ರಾಜೆಕ್ಟ್ ಅನೌನ್ಸ್ ಮಾಡ್ತಾರಾ? ಎಂದು ಕಾದುನೋಡಬೇಕಿದೆ.

ರಾಕಿಭಾಯ್ ದಾಖಲೆಗಳ ಹೈಲೈಟ್ಸ್

ಆದರೆ, ಆಲ್​ಟೈಂ ಅನ್​ಬ್ರೇಕಬಲ್ ರೆಕಾರ್ಡ್ಸ್ ಮಾಡಿರೋ ಕೆಜಿಎಫ್ ಚಾಪ್ಟರ್-2 ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವಂತೂ ಬರೆದಿದೆ. ಚೆನ್ನೈ ಪಿವಿಆರ್​ನಲ್ಲಿ  125 ಕೋಟಿ ಗಳಿಸಿದ ಮೊದಲ ಸಿನಿಮಾ ಕೆಜಿಎಫ್-2. ಎಲ್ಲಾ ರಾಜ್ಯಗಳಲ್ಲಿ ಮೊದಲ ದಿನ ಅತಿ ಹೆಚ್ಚು ಕೆಲಕ್ಷನ್ ಮಾಡಿದ ಚೊಚ್ಚಲ ಸಿನಿಮಾ ಇದು. ಬಾಹುಬಲಿ ಹಾಗೂ ಗದ್ದರ್ ನಂತ್ರ ಅತಿ ಹೆಚ್ಚು ಟಿಕೆಟ್​ಗಳು ಮಾರಾಟಗೊಂಡ ಸಿನಿಮಾ ಅನ್ನೋ ಹೆಗ್ಗಳಿಕೆ. ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಸಿದ ಭಾರತದ ಮೂರನೇ ಸಿನಿಮಾ ಆಗಿ ಕೆಜಿಎಫ್-2 ಮಿಂಚು. ಬಾಹುಬಲಿ 2 ನಂತ್ರ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅನಿಸಿಕೊಂಡಿತು.

ಹೈದ್ರಾಬಾದ್​ನಲ್ಲಿ ಮೊದಲ ಬಾರಿ ಏಳು ಕೋಟಿಗೂ ಅಧಿಕ ಮುಂಗಡ ಟಿಕೆಟ್ ಬುಕಿಂಗ್ ಆದ ಚಿತ್ರವಿದು. ಕೊವಿಡ್ ನಂತ್ರ ಉತ್ತರ ಭಾರತದಲ್ಲಿ 4,400ಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ ತೆರೆಕಂಡ ಮೊದಲ ಚಿತ್ರ. ಜರ್ಮನಿಯಲ್ಲಿ ಹಿಂದಿ ಅವೃತ್ತಿ 87 ಸ್ಕ್ರೀನ್ಸ್​​ನಲ್ಲಿ ರಿಲೀಸ್. ಅಡ್ವಾನ್ಸ್ ಬುಕಿಂಗ್​ನಲ್ಲಿ ಬೆಂಗಳೂರು ಒಂದರಲ್ಲೇ 10 ಕೋಟಿ ದಾಟಿತ್ತು. ಫಸ್ಟ್ ವೀಕೆಂಡ್​​ನಲ್ಲಿ ಬಾಹುಬಲಿ2 ಗಳಿಕೆಯನ್ನ ಹಿಂದಿಕ್ಕಿ 552 ಕೋಟಿ ಗಳಿಕೆ. ಯುಕೆನಲ್ಲಿ 12 ಗಂಟೆಯಲ್ಲಿ ಐದು ಸಾವಿರ ಟಿಕೆಟ್ಸ್ ಸೋಲ್ಡ್ ಔಟ್. ಹೀಗೆ ದಾಖಲೆಗಳ ಪಟ್ಟಿ ಹೇಳ್ತಾ ಹೋದರೆ ಇಡೀ ದಿನ ಬೇಕಾಗುತ್ತದೆ.

ಕೆಜಿಎಫ್ ಸಿನಿಮಾ ನಿಜಕ್ಕೂ ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದ ಪಾಲಿಗೆ ಮೈಲಿಗಲ್ಲು. ಇದು ಮಾಡಿದ ದಾಖಲೆಗಳು ಸಾರ್ವಕಾಲಿಕ. ಆದಷ್ಟು ಬೇಗ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರ್ ಜೋಡಿ ಒಂದಾಗಲಿ. ಕೆಜಿಎಫ್ ಚಾಪ್ಟರ್-3 ಕಿಕ್​ಸ್ಟಾರ್ಟ್​ ಆಗಲಿ. ಕೆಜಿಎಫ್ 2 ರೆಕಾರ್ಡ್ಸ್ ಬ್ರೇಕ್ ಆಗಿ ನೂತನ ದಾಖಲೆ ಬರೆಯುವಂತಾಗಲಿ ಎನ್ನುವುದು ಸಿನಿಪ್ರೇಕ್ಷಕರ ಆಶಯ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES