ಬೆಂಗಳೂರು : ಅಂಬೇಡ್ಕರ್ ಅವರ ದೂರದರ್ಶಿತ್ವದಿಂದಾಗಿ 140 ಕೋಟಿ ದೇಶವಾಸಿಗಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅವರು ಭೇಟಿ ನೀಡಿದ್ದ 10 ಸ್ಥಳಗಳನ್ನು ಪುಣ್ಯಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಯಶವಂತಪುರ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿ, ದಲಿತರ ಏಳ್ಗೆಯ ಗುರಿಯೊಂದಿಗೆ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದ್ದು, ಒಳಮೀಸಲಾತಿಯನ್ನೂ ಜಾರಿಗೆ ತಂದಿದೆ. ಇಂತಹ ಇಚ್ಛಾಶಕ್ತಿಯನ್ನು ಕಾಂಗ್ರೆಸ್ಸಾಗಲಿ, ಜೆಡಿಎಸ್ ಆಗಲಿ ಪ್ರದರ್ಶಿಸಿಲ್ಲ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಪ್ರತಿಪಕ್ಷಗಳಿಗೆ ನಡುಕ ಉಂಟಾಗಿದೆ
ಒಳಮೀಸಲಾತಿಯನ್ನು ಕೊಡಲು ಆ ಪಕ್ಷಗಳಿಗೆ ಭಯವಿತ್ತು. ಈ ಮೂಲಕ ಬಿಜೆಪಿ ಸರಕಾರವು ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಇದರಿಂದ ದಲಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳ ಪ್ರಯೋಜನ ಸಿಗಲಿದೆ. ಇದನ್ನು ಕಂಡು ಪ್ರತಿಪಕ್ಷಗಳಿಗೆ ನಡುಕ ಉಂಟಾಗಿದ್ದು, ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಭಿನ್ನಮತ ಶೀಘ್ರ ಶಮನ ಆಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
5 ಸ್ಥಳ ‘ಪಂಚತೀರ್ಥ ಕ್ಷೇತ್ರ’ಗಳಾಗಿ ಅಭಿವೃದ್ಧಿ
ಅಂಬೇಡ್ಕರ್ ಅವರು ಬಲಿಷ್ಠ ಭಾರತವನ್ನು ಕಟ್ಟುವ ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಸಂವಿಧಾನ ದಿನವನ್ನು ಆಚರಿಸುವ ಸತ್ಸಂಪ್ರದಾಯ ಆರಂಭವಾಗಿದೆ. ಈ ಮೂಲಕ ಸಂವಿಧಾನವನ್ನು ಮನನ ಮಾಡಿಕೊಳ್ಳುವ ಸಂಸ್ಕೃತಿಗೆ ನಾಂದಿ ಹಾಡಲಾಗಿದೆ. ಇದರ ಜತೆಗೆ ಅಂಬೇಡ್ಕರ್ ಅವರ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿದ ಐದು ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವದ ಅಂಗವಾಗಿ, ನಮ್ಮ ಮಲ್ಲೇಶ್ವರದ ಯಶವಂತಪುರದ ಬಳಿಯ ಸಂವಿಧಾನ ವೃತ್ತದಲ್ಲಿರುವ ಅಂಬೇಡ್ಕರರ ಪ್ರತಿಮೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಶ್ರೀ @ArunSinghbjp ಅವರ ಉಪಸ್ಥಿತಿಯಲ್ಲಿ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಲಾಯಿತು.
ಸಾಮಾಜಿಕ ನ್ಯಾಯಕ್ಕೆ ಸಂವಿಧಾನ ಶಿಲ್ಪಿಯ ಕೊಡುಗೆ ಅಪಾರ.#AmbedkarJayanti pic.twitter.com/rtRorfH4AA
— Dr. Ashwathnarayan C. N. (@drashwathcn) April 14, 2023
ಬಿಜೆಪಿ ಸರಕಾರವು ದಲಿತ ಸಮುದಾಯಗಳ ಏಳ್ಗೆಗೆ ಹತ್ತಾರು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿದೆ. ನಾವು ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಪೂಜ್ಯ ಭಾವದಿಂದ ನೋಡುತ್ತೇವೆ. ಹೀಗಾಗಿಯೇ ಮೋದಿ ಅವರು ಸಂವಿಧಾನವನ್ನು ಧರ್ಮಗ್ರಂಥಗಳಿಗಿಂತ ಹೆಚ್ಚು ಪವಿತ್ರವಾಗಿದೆ ಎಂದು ಬಣ್ಣಿಸಿದರು ಎಂದಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ಮುಖಂಡರಾದ ಸುರೇಶ್ ಗೌಡ, ಜೈಪಾಲ್, ಕಾವೇರಿ ಕೇದಾರನಾಥ ಮತ್ತಿತರರು ಉಪಸ್ಥಿತರಿದ್ದರು.