ಬೆಂಗಳೂರು : ಬಿಜೆಪಿ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಚಿಕ್ಕೋಡಿಯಲ್ಲಿ ಅಣ್ಣಾಸಾಬ ಜೊಲ್ಲೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸವದಿ, ನಾನು ಯಾವ ಅಪರಾಧ ಮಾಡಿದ್ದೇನೆ. ಪದವಿ ಕೊಟ್ಟು ಕಸಿದಿದ್ದು ಏಕೆ. ನಾನೇನು ಕಳ್ಳತನ ಮಾಡಿದ್ದೀನಾ? ಭ್ರಷ್ಟಾಚಾರ ಮಾಡಿದ್ದೀನಾ? ಯಾರದ್ದಾದರೂ ಸೀರೆ ಜಗಿದ್ದೆನಾ? ಅಥವಾ ರೇಪ್ ಮಾಡಿದ್ದೀನಾ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಣ್ಣಾಸಾಬ ಜೊಲ್ಲೆ ಅವರನ್ನು ನನ್ನ ಭೇಟಿಗೆ ಹೈ ಕಮಾಂಡ್ ಹೇಳಿ ಕಳಿಸಿಲ್ಲ. ಅವರು ಈ ಭಾಗದ ಎಂಎಲ್ ಸಿ. ನನ್ನ ಸ್ನೇಹಿತರಾಗಿ ಬಂದಿದ್ದರು. ಯೋಗಕ್ಷೇಮ ಮತ್ತು ರಾಜಕೀಯ ತೀರ್ಮಾನ ಕೇಳಿದರು ಎಂದು ಅಣ್ಣಾಸಾಬ ಜೊಲ್ಲೆ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೊಮ್ಮಾಯಿ ಹಳೆಯ ಫ್ರೆಂಡ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ಹಳೆಯ ಸ್ನೇಹಿತರು. ಅವರ ವಿಚಾರ ಬೇರೆ ನನ್ನ ವಿಚಾರ ಬೇರೆ. ಆ ನಂತರದಲ್ಲಿ ಅವರು ನಾವು ಕೂಡಿ ಕೆಲಸ ಮಾಡಿದ್ದೇವೆ. ನನಗೆ ರಾಜಕೀಯವಾಗಿ ಅನಿವಾರ್ಯವಾಗಿದೆ. ನನಗೆ ಬಹಳ ನೋವಾಗಿದೆ ಎಂದು ಸವದಿ ಹೇಳಿದ್ದಾರೆ.
ಅಸೂಯೆ, ಅವಮಾನ ಎಲ್ಲಾ ಆಗಿದೆ
ಟಕೆಟ್ ಗಾಗಿ ನಾನು ಹೊರಟಿಲ್ಲ. ಅಸೂಯೆ, ಅವಮಾನ ಎಲ್ಲವೂ ಆಗಿದೆ. ಆಂತರಿಕ ದೋಷಗಳು ಮತ್ತು ಆಂತರಿಕವಾಗಿ ಜಿಲ್ಲಾ ಮತ್ತು ರಾಜ್ಯದವರು ಕೊಟ್ಟ ತೊಂದರೆ ಆದರೂ ಇಲ್ಲಿವರೆಗೆ ಬಂದಿದ್ದೇನೆ. ಅನೇಕ ಕಡೆ ವೇದಿಕೆ ಅವಕಾಶ ಕೊಟ್ಟಿಲ್ಲ. ಅದೆಲ್ಲ ಮಾತನಾಡುವ ಅಗತ್ಯ ಇಲ್ಲ. ನಾನು ಉಪಮುಖ್ಯಮಂತ್ರಿ ಆಗಿದ್ದೆ ಒಮ್ಮೆಲೆ ಪದವಿ ಕಸಿದರು. ಆಗಲೂ ನಾನು ಮೌನವಹಿಸಿದ್ದೆ. ಟಿಕೆ ಟಿಪ್ಪಣಿ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ದೊಡ್ಡಬಳ್ಳಾಪುರದಲ್ಲಿ ‘ಧೀರಜ್’ ದರ್ಬಾರ್ : ಅಬ್ಬರದ ಪ್ರಚಾರ
ನಾಳೆ ರಾಜೀನಾಮೆ ಕೊಡುತ್ತೇನೆ
ನಾನು ಸೋತ ಸಂಧರ್ಭದಲ್ಲಿ ಪಕ್ಷ ಕೊಟ್ಟ ಅವಕಾಶ ದೊಡ್ಡದು. ಟೀಕೆ ಮಾಡುವದಿಲ್ಲ. ಅದರಿಂದ ಲಾಭ ಇಲ್ಲ. ಒಬ್ಬರಿಗೂ ಕೆಡಕು ಬಯಸಲ್ಲ, ಅಸೂಯೆಯೂ ಇಲ್ಲ. ರಾಜಕೀಯ ದ್ರುವೀಕರಣ ಆಗುವ, ಬಿಡುವ ಬಗ್ಗೆ ಗೊತ್ತಿಲ್ಲ. ನಾನೊಂದು ಮರದ ತಪ್ಪಲು. ಪಕ್ಷದ ಸದಸ್ಯತ್ವಕ್ಕೆ ನಾಳೆ ರಾಜೀನಾಮೆ ಕೊಡುತ್ತೇನೆ ಎಂದು ಸವದಿ ಸ್ಪಷ್ಟಪಡಿಸಿದ್ದಾರೆ.
ಜನರ ಅಭಿಪ್ರಾಯವನ್ನು ಕೇಳಿ ಮುಂದಿನ ನೀರ್ಣಯ ಮಾಡುತ್ತೇನೆ. ಇಂದು ರಾತ್ರಿ ಬೆಂಗಳೂರು ತೆರಳಿ ಸಭಾಪತಿಗಳನ್ನು ಭೇಟಿ ಮಾಡಿ ಪಕ್ಷದ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ರಾಜಕೀಯ ಗುರುಗಳಾದ ಬಿ.ಎಲ್ ಸಂತೋಷ ಕರೆ ಸ್ವೀಕರಿಸುತ್ತಿಲ್ಲ. ಯಾಕೆಂದರೆ ಗುರುವಿಗೆ ಮರಳಿ ಉತ್ತರ ಕೊಡುವ ಶಕ್ತಿ ನನಗೆ ಉಳಿದಿಲ್ಲ. ಅವರು ನನ್ನ ಪರವಾಗಿ ಪ್ರಯತ್ನಮಾಡಿಲ್ಲ ಅನ್ನಿಸಿಲ್ಲ. ಅವರಿಗೆ ಉತ್ತರ ಕೊಡಲು ಮರು ಮಾತನಾಡಲು ನನಗೆ ಮುಜಗುರವಾಗುತ್ತದೆ. ನಾನು ನಿನ್ನೆಯೆ ಕ್ಷಮೆ ಕೇಳಿದ್ದೇನೆ. ನನಗೆ ಯಾರೂ ನೇರವಾಗಿ ಕರೆ ಮಾಡಿಲ್ಲ ಎಂದು ತಿಳಿಸಿದ್ದಾರೆ.