ಬೆಂಗಳೂರು : ಜೆಡಿಎಸ್ ಪಕ್ಷಕ್ಕೆ ಕಗ್ಗಂಟಾಗಿರುವ ಹಾಸನ ಟಿಕೆಟ್ ಅನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಫೈನಲ್ ಮಾಡುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಅಂತಿಮ ತೀರ್ಮಾನವನ್ನು ಅವರೇ ಕೈಗೊಳ್ಳಲಿದ್ದು, ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತ ಯಾರು?
ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರಿಗೆ ಗೊತ್ತಿದೆ. ರಾಜಕೀಯದಲ್ಲಿ ದೇವೇಗೌಡರಿಗೆ 60 ವರ್ಷದ ಅನುಭವವಿದ್ದು, ಅವರೇ ಟಿಕೆಟ್ ಫೈನಲ್ ಮಾಡುತ್ತಾರೆ. ದೇವೇಗೌಡರ ಮಾತನ್ನು ನಾನು ಮೀರುವುದಿಲ್ಲ. ಅವರು ನಮ್ಮ ಸರ್ವೋಚ್ಚ ನಾಯಕರು. ಹಿಂದೆಯೂ ನಾನು ಮೀರಿಲ್ಲ ಮುಂದೆಯೂ ಮೀರುವುದಿಲ್ಲ. ಅವರು ಹೇಳಿದ್ದನ್ನು ಯಾವತ್ತೂ ನಾವು ದಾರಿ ತಪ್ಪಿಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ : ಗುಡ್ ನ್ಯೂಸ್ : ಪ್ರಚಾರದ ಅಖಾಡಕ್ಕೆ ದೇವೇಗೌಡ್ರು ಎಂಟ್ರಿ
ದೇವೇಗೌಡರ ಆಶೀರ್ವಾದ ಎಂದ ರೇವಣ್ಣ
ದೇವೇಗೌಡರ ಆಶೀರ್ವಾದದಿಂದ ಜಿಲ್ಲೆಯಲ್ಲಿ ಐದು ಬಾರಿ ಶಾಸಕನಾಗಿದ್ದೇನೆ. ಭವಾನಿ ರೇವಣ್ಣ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಸೂರಜ್ ರೇವಣ್ಣ ಶಾಸಕರಾಗಿದ್ದರು. ಪ್ರಜ್ವಲ್ ರೇವಣ್ಣ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ದೇವೇಗೌಡರ ಆಶೀರ್ವಾದ, ಅವರು ಏನು ಹೇಳ್ತಾರೆ ಅದೇ ಅಂತಿಮ ಎಂದು ಕಡ್ಡಿ ಮುರಿದಂತೆ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಎರಡು ಕಡೆ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ರೇವಣ್ಣ ಖಡಕ್ ಪ್ರತಿಕ್ರಿಯೆ ನಿಡಿದ್ದಾರೆ. ನಾನ್ಯಾಕೆ ಎರಡು ಕಡೆ ನಿಲ್ಲೋದಕ್ಕೆ ಹೋಗಲಿ. ನನ್ನ ಕ್ಷೇತ್ರ ಹೊಳೆನರಸೀಪುರ. ಕಳೆದ 30 ವರ್ಷಗಳಿಂದ ಈ ಕ್ಷೇತ್ರ ಜನ ನನನ್ನು ಸಾಕಿದ್ದಾರೆ. ಈ ಜನರನ್ನು ನಾನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ. ನಾನಾಗಲಿ ನನ್ನ ಕುಟುಂಬ ಆಗ್ಲಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಮೊದಲ ಪ್ರಾಮುಖ್ಯತೆ ಏನಿದ್ರೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಎಂದು ಸ್ಪಷ್ಟನೆ ನೀಡಿದ್ದಾರೆ.