ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ (ಎರಡು ಪಟ್ಟಿ) ಹಾಗೂ ಜೆಡಿಎಸ್ ಪಕ್ಷಗಳು (ಒಂದು ಪಟ್ಟಿ)ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ. ಆದರೆ, ಆಡಳಿತರೂಢ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಮಾಜಿ ಡಿಸಿಎಂ ಲಕ್ಷಣ ಸವದಿಗೆ ಈ ಬಾರಿ ಟಿಕೆಟ್ ಕೈ ತಪ್ಪುತ್ತೆ ಅನ್ನೋ ಟಾಕ್ ಎದ್ದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಶಾಸಕ ಮಹೇಶ ಕುಮಟಳ್ಳಿ ಮಧ್ಯೆ ಫೈಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ, ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ಜೊತೆಗೆ ಶ್ರೀಮಂತ ಪಾಟೀಲ ಸೇರಿ ಬಿಜೆಪಿ ಸೇರಿದ ಎಲ್ಲರಿಗೂ ಬಿಜೆಪಿ ಟಿಕೆಟ್ ಸಿಗಲಿದೆ. ಸೋಲು, ಗೆಲುವು ದೇವರ ಇಚ್ಛೆ, ಲಕ್ಷ್ಮಣ ಸವದಿ ಹತಾಶೆ ಆಗ್ತಿರೋದೇಕೆ ಗೊತ್ತಾಗುತ್ತಿಲ್ಲ. ಏಕೆ ಇಷ್ಟು ಚಡಪಡಿಸುತ್ತಿದ್ದೀಯಾ? ಲಕ್ಷ್ಮಣ ಅಣ್ಣಾ, ಅರಾಮಾಗಿರು ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಮೃದ್ಧಿ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ಕಾಂಗ್ರೆಸ್ ನಾಯಕರು
ಈ ಹಿಂದೆ ಬಿಜೆಪಿ ಸೇರಿದ 17 ಶಾಸಕರಿಗೂ ಬಿಜೆಪಿ ಹೈಕಮಾಂಡ್ ಆಶೀರ್ವಾದ ನೀಡಲಿದೆ. ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಬರುವುದಿಲ್ಲ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ನೀಡುತ್ತದೆ. 17 ಶಾಸಕರಿಗೂ ಸಹ ಟಿಕೆಟ್ ಭಾಗ್ಯ ಸಿಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಂದು ಸಂಜೆ ಸಂಸದಿಯ ಮಂಡಳಿ ಸಭೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳ ವಿಚಾರ ಚರ್ಚೆ ಮಾಡಲಾಗುವುದು. ಸಂಜೆ ಐದು ಗಂಟೆಗೆ ಸಂಸದಿಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.