Wednesday, January 8, 2025

ಕುಮಾರಸ್ವಾಮಿ ಅಡುಗೆ ಮನೆಯಲ್ಲಿ ಕೂತು ಟಿಕೆಟ್ ಕೊಡಬಹುದು : ತೇಜಸ್ವಿ ಸೂರ್ಯ

ಬೆಂಗಳೂರು : ಜೆಡಿಎಸ್ ಪಕ್ಷದವರು ಟಿಕೆಟ್ ಪ್ರಕಟ ಮಾಡೋದು ಬಹಳ ಸುಲಭ. ಕುಮಾರಸ್ವಾಮಿ ಅವರು ತಮ್ಮ ಅಡುಗೆ ಮನೆಯಲ್ಲಿ ಕೂತು ಚರ್ಚೆ ಮಾಡಿ ಕೊಡಬಹುದು ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಸನದಲ್ಲಿ ಸೊಸೆಗೆ ಟಿಕೆಟ್ ಕೊಡಬೇಕಾ? ಮಗನಿಗೆ ಕೊಡಬೇಕಾ? ಅಥವಾ ಇನ್ಯಾರಿಗೆ ಕೊಡಬೇಕಾ? ಅನ್ನೋದು ಅವರೇ ತೀರ್ಮಾನ ಮಾಡ್ತಾರೆ. ಈಗ ಅದೂ ಅವರಿಗೆ ಕಷ್ಟ ಆಗುತ್ತಿದೆ. ಸೊಸೆಗೆ ಕೊಟ್ರೆ ಮಗ ಬೇಡ ಅಂತಾನೆ, ಮಗನಿಗೆ ಕೊಟ್ರೆ ಇತ್ತ ಗಂಡ ಬೇಡ ಅಂತಾನೆ. ಅವರ ಕಷ್ಟ ಯಾರಿಗೂ ಬೇಡ ಎಂದು ಲೇವಡಿ ಮಾಡಿದ್ದಾರೆ.

ಹಾದಿಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ

ಇನ್ನು ಕಾಂಗ್ರೆಸ್ ನಲ್ಲಿ ಆ ಬಣಕ್ಕೆ ಒಂದಿಷ್ಟು ಟಿಕೆಟ್, ಈ ಬಣಕ್ಕೆ ಒಂದಿಷ್ಟು ಟಿಕೆಟ್ ಕೊಟ್ಟು ಬಿಟ್ರೆ ಮುಗಿತು. ಈಗ ಅವರು ಇದೇ ರೀತಿ ಮಾಡಿರುವುದು. ಇದರಿಂದ ಕಾಂಗ್ರೆಸ್ ಪಕ್ಷದವರು ರಸ್ತೆ-ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಟ್ಟಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸದ ಬಗ್ಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ನಮ್ಮ ಪಕ್ಷ ಕಾರ್ಯಕರ್ತರ ಆಧಾರಿತ ಪಾರ್ಟಿ. ಶಕ್ತಿ ಕೇಂದ್ರಗಳ ಸದಸ್ಯರು, ಜಿಲ್ಲಾ ಕೋರಕಮಿಟಿ ಸದಸ್ಯರು ಮತ್ತು ರಾಜ್ಯ ಕೋರಕಮಿಟಿ ಸದಸ್ಯರ ಅಭಿಪ್ರಾಯ ಆಧರಿಸಿ ರಾಷ್ಟ್ರೀಯ ಕೋರಕಮಿಟಿ ಟಿಕೆಟ್ ನಿರ್ಣಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ : ಸಿಎಂ ಬೊಮ್ಮಾಯಿ ಭವಿಷ್ಯ

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 10ರಂದು ಭಾಗಿಯಾಗುವ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ಆಗಲಿದೆ. ಇದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ನಮ್ಮ ಪಕ್ಷದ ಕ್ರಮಗಳನ್ನು ಬೇರೆಯವರು ಅನುಸರಿಸಬೇಕೇ ಹೊರತು ಅವರು ಬೇಗ ಟಿಕೆಟ್ ಅನೌನ್ಸ ಮಾಡಿದ್ರು ಅಂತ ನಾವು ಅನೌನ್ಸ ಮಾಡಲು ಆಗಲ್ಲ ಎಂದು ತಿಳಿಸಿದ್ದಾರೆ.

ಚುನಾವಣೆ ಇದ್ದಿದ್ರೆ ಕಾಂಗ್ರೆಸ್ ಸೋಲುತ್ತಿತ್ತು

ಕಳೆದ ಬಾರಿ ನಾನು ಕಲಬುರಗಿಗೆ ಬಂದಾಗ ಕಾಂಗ್ರೆಸ್ ಮೇಯರ್ ಚುನಾವಣೆ ಸೋತಿತ್ತು. ಇವತ್ತು ಯಾವುದಾದ್ರೂ ಚುನಾವಣೆ ಇದ್ದಿದ್ರೆ ಬಹುಶಃ ಆ ಚುನಾವಣೆಯನ್ನೂ ಕಾಂಗ್ರೆಸ್ ಸೋಲುತಿತ್ತು. ಹೊಸ ರಣತಂತ್ರ ಏನು ಮಾಡಬೇಕು ಅಂತ ಕಾಂಗ್ರೆಸ್ ನವರು ಯೋಚಿಸಬೇಕು ಎಂದು ಕುಟುಕಿದ್ದಾರೆ.

ನಮ್ಮ ರಣತಂತ್ರ ದೇಶದೆಲ್ಲೆಡೆ ಒಂದೆ ಇದೆ. ವರ್ಷ ಪೂರ್ತಿ ಸೇವೆ ಮಾಡುವುದು ಒಂದೇ ನಮ್ಮ ರಣತಂತ್ರ. ಜನರ ಮಧ್ಯೆ ಇದ್ದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸುವುದೇ ನಮ್ಮ ರಣತಂತ್ರ. ಇದರಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ. ಹಾಗಾಗಿ, ಹೊಸ ರಣತಂತ್ರ ನಮಗೆ ಅಗತ್ಯ ಇಲ್ಲ. ಅದೇನಿದ್ರೂ ಕಾಂಗ್ರೆಸ್ ಹುಡುಕಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES