Monday, December 23, 2024

ನಂಜಾವಧೂತ ಶ್ರೀಗಳ ಮಾತಿಗೆ ಬಿಜೆಪಿ ಬಳಿ ಉತ್ತರ ಇದ್ಯಾ?

ಬೆಂಗಳೂರು : ‘ಒಕ್ಕಲಿಗರು ಬೇರೆಯವರ ಅನ್ನ ಕಿತ್ತು ತಿನ್ನುವವರಲ್ಲ’ ಎಂಬ ನಂಜಾವಧೂತ ಶ್ರೀಗಳ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರದ ಬಳಿ ಉತ್ತರವಿದೆಯೇ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನಂಜಾವಧೂತ ಶ್ರೀಗಳ ಈ ಮಾತಿಗೆ ಸರ್ಕಾರದ ಬಳಿ ಉತ್ತರವಿದೆಯೇ? ಒಕ್ಕಲಿಗ ಎಂದರೆ ಒಕ್ಕಲುತನ ಮಾಡಿ ಇತರರಿಗೆ ಉಣಬಡಿಸುವವನು ಎಂದರ್ಥ. ಇನ್ನೊಬ್ಬರನ್ನು ಕಿತ್ತು ತಿನ್ನುವವರಲ್ಲ ಎಂದು ಕುಟುಕಿದೆ.

ಮೀಸಲಾತಿ ಗೊಂದಲ ಸೃಷ್ಟಿಸಿದ ಬಿಜೆಪಿ ಬಂಜಾರರ, ಒಕ್ಕಲಿಗರ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲವೇಕೆ? ದಮ್ಮು ತಾಕತ್ತಿದ್ದರೆ ಬಸವರಾಜ ಬೊಮ್ಮಾಯಿ ಅವರು ಮಾತಾಡಲಿ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಚುನಾವಣೆಗಾಗಿ ಬಿಜೆಪಿ ಎಲ್ಲಾ ಸಮುದಾಯಗಳ ಕಿವಿ ಮೇಲೆ ಹೂವು ಇಟ್ಟು ಮುಂಗೈಗೆ ತುಪ್ಪ ಸವರಿದೆ. ಮೀಸಲಾತಿ ವಿಚಾರದಲ್ಲಿ ಒಕ್ಕಲಿಗರಿಗೆ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಹಂಚಿ ಮೋಸ ಮಾಡಿದೆ ಬಿಜೆಪಿ ಎಂದು ನಂಜಾವಧೂತ ಶ್ರೀಗಳು ಕಿಡಿಕಾರಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ಶ್ರೀಗಳ ಮಾತಿಗೆ ನಿಮ್ಮಲ್ಲಿ ಉತ್ತರವಿದೆಯೇ? ಎಂದು ಕುಟುಕಿದೆ.

ಮೀಸಲಾತಿ ವಿರುದ್ಧ ಸಿಡಿದೆದ್ದ ಸ್ವಾಮೀಜಿ

‘ಯಾರದ್ದೋ ಮೀಸಲಾತಿಯನ್ನು ಕಿತ್ತು ಕೊಟ್ಟಿದ್ದು ಒಕ್ಕಲಿಗರು ಬೇರೆಯವರ ಅನ್ನ ಕಿತ್ತು ತಿನ್ನುವವರಲ್ಲ’ ಎನ್ನುವ ಮೂಲಕ ಸ್ಪಟಿಕಪುರಿ ಮಹಾಸಂಸ್ಥಾನ ಪೀಠದ ನಂಜಾವಧೂತ ಸ್ವಾಮೀಜಿ ಸರ್ಕಾರದ ಮೀಸಲಾತಿ ವಿರುದ್ಧ ಸಿಡಿದೆದ್ದಿದ್ದಾರೆ.

ಶೇ.16ಕ್ಕೆ ಮೀಸಲಾತಿ ಹೆಚ್ಚಳ ಮಾಡಿ

ಮಂಡ್ಯದಲ್ಲಿ ಮಾತನಾಡಿರುವ ನಂಜಾವಧೂತ ಶ್ರೀಗಳು, ರಾಜ್ಯ ಜನಸಂಖ್ಯೆಯಲ್ಲಿ ಒಕ್ಕಲಿಗರು ಶೇ.16ರಷ್ಟು ಇದ್ದು ನಾವು ಕೇಳಿದ್ದು ಶೇ.4ರಿಂದ ಶೇ.16ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಅಂತ. ಆದರೆ, ಯಾರದ್ದೋ ಶೇ.2ರಷ್ಟು ಮೀಸಲಾತಿ ಕಿತ್ತು ಶೇ.6ಕ್ಕೆ ಏರಿಕೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವು ರಾಜ್ಯಗಳ ಸರ್ಕಾರಗಳನ್ನು ನೋಡುತ್ತಿದ್ದೇವೆ. ಕೀಳು ಮಟ್ಟದ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಅಗತ್ಯಕ್ಕೂ ಮೀರಿ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಾರೆ. ಅಂತಹದ್ದೇ ರಾಜ್ಯ ನಮ್ಮದು ಆಗಬಾರದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES