ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಮಂಡ್ಯ ರಾಜಕೀಯ ಕಣ ರಂಗೇರುತ್ತಿದೆ. ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ದಳಪತಿಗಳು ವಾಗ್ದಾಳಿ ನಡೆಸುತ್ತಿದ್ದಾರೆ.
ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ತಮ್ಮ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ತಮ್ಮ ಎದುರಾಳಿ ‘ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುವುದೇ ನನ್ನ ಗುರಿ’ ಎಂದಿದ್ದ ಸುಮಲತಾ ಅಂಬರೀಶ್ ವಿರುದ್ಧ ಹರಿಹಾಯ್ದಿದ್ದಾರೆ.
ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಸಚಿವ ಕೆ.ಸಿ ನಾರಾಯಣ ಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಲೋಕಸಭೆಗೆ ಆಯ್ಕೆಯಾಗಿ ಈಗ ಬಿಜೆಪಿಯನ್ನು ಬೆಂಬಲಿಸುತ್ತಿರುವ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಆಕಸ್ಮಿಕ ಕೂಸು
ಕೆ.ನೆಟ್ಟಹಳ್ಳಿ ಹೋಬಳಿಯಲ್ಲಿ ಮಾತಾಡಿದ ಶ್ರೀಕಂಠಯ್ಯ, ಜೆಡಿಎಸ್ ಭದ್ರಕೋಟೆಯನ್ನು ಬೇಧಿಸುತ್ತೇನೆ. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಅಂತ ಸುಮಲತಾ ಅವರು ಹೇಳುವುದು ಸರಿಯಲ್ಲ. ಪಕ್ಷ ಹೇಗೆ ಅಸ್ತಿತ್ವಕ್ಕೆ ಬಂದಿದೆ ಅವರಿಗೆ ಗೊತ್ತಿಲ್ಲ. ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಬಿಜೆಪಿಯ ಆಕಸ್ಮಿಕ ಕೂಸು ಎಂದು ಸುಮಲತಾ ಅಂಬರೀಶ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸುವ ಸಮಯ
ಜೆಡಿಎಸ್ ಭದ್ರಕೋಟೆ ಗೋಡೆ ಹೊಡೆದಿದೆ. ಛಿದ್ರ ಮಾಡವುದು ಮಾತ್ರ ಬಾಕಿ ಎಂದು ಸಂಸದೆ ಸುಮಲತಾ ಟೀಕಾಪ್ರಹಾರ ನಡೆಸಿದ್ದರು. ನನ್ನ ಚುನಾವಣೆಯಲ್ಲೇ ಜೆಡಿಎಸ್ ಭದ್ರಕೋಟೆಯ ಗೋಡೆ ಹೊಡೆದುಹೋಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಸಮಯ ಬಂದಿದೆ. ನಾವು ಮಿಸ್ ಮಾಡಿಕೊಳ್ಳಬಾರದು ಎಂದು ಸುಮಲತಾ ಹೇಳಿಕೆ ನೀಡಿದ್ದರು.