ಬೆಂಗಳೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಯತೀಂದ್ರ ಅವರ ತಂದೆ, ವಿಪಕ್ಷನಾಯಕ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟ ಮೇಲೆ, ಯತೀಂದ್ರ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಈಗ ಚುನಾವಣಾ ಅಖಾಡದಿಂದಲೇ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಸೇರಿದಂತೆ ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ ಎಂದು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ವರುಣಾ ಕ್ಷೇತ್ರ ಅಥವಾ ಬೇರೆ ಯಾವ ಕ್ಷೇತ್ರದಿಂದಲೂ ನಾನು ಸ್ಪರ್ಧೆ ಮಾಡಲ್ಲ. ತಂದೆಯವರ ಪರವಾಗಿ ಜನವರಿಯಿಂದಲೇ ನಾನು ಪ್ರಚಾರ ಶುರು ಮಾಡಿದ್ದೇನೆ. ವರುಣಾ ಕ್ಷೇತ್ರ ಯಾವೊಬ್ಬ ವ್ಯಕ್ತಿಗೆ ಸೇರಿದ್ದಲ್ಲ. ತಂದೆಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿಲ್ಲ. ವರುಣಾ ಕ್ಷೇತ್ರ ಸೇರಿದ್ದು ಆ ಕ್ಷೇತ್ರದ ಮತದಾರರಿಗೆ. ತಂದೆಯವರ ಕೊನೆ ಚುನಾವಣೆ. ಹೀಗಾಗಿ ವರುಣಾದಲ್ಲಿ ನಿಲ್ಲಬೇಕೆಂಬುದು ಜನರ ಅಭಿಪ್ರಾಯ ಎಂದು ಯತೀಂದ್ರ ತಿಳಿಸಿದ್ದಾರೆ.
ಸಿದ್ದು ಸೋಲಿಸಲು ಬಿಜೆಪಿ ಪ್ಲಾನ್
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದ್ದು, ಸಿದ್ದು ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನು ಕಣಕ್ಕಿಳಿಸಲು ತಯಾರಿ ನಡೆಸಲಾಗಿದೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವರುಣಾ ಕ್ಷೇತ್ರ ಬೇಡವೆಂದು ಹೇಳಿದ್ದಾರೆ.