Monday, December 23, 2024

ಕಾರಿನಲ್ಲೇ ಯುವತಿ ಗ್ಯಾಂಗ್ ರೇಪ್ : ಆರಗ ಜ್ಞಾನೇಂದ್ರ ‘ಅದಕ್ಷ’ ಎಂದು ಸಿದ್ದರಾಮಯ್ಯ ಕಿಡಿ

ಬೆಂಗಳೂರು : ಕೋರಮಂಗಲದ ಪಾರ್ಕ್ ನಲ್ಲಿ ಕುಳಿತಿದ್ದ ಯುವತಿಯನ್ನು ನಾಲ್ವರು ಎಳೆದೊಯ್ದು ಕಾರಿನಲ್ಲೇ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದಾರಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದೆ.  

ಬೆಂಗಳೂರಿನ ಕಗ್ಗಲೀಪುರದ ಬಾಲಕಿಯ ಅತ್ಯಾಚಾರ ಪ್ರಕರಣ ನಡೆದು ವಾರ ಕಳೆದಿಲ್ಲ. ಅಷ್ಟರಲ್ಲೇ ಕೋರಮಂಗಲದಲ್ಲಿ ಯುವತಿಯನ್ನು ನಾಲ್ವರು ರಾಕ್ಷಸರು ಅತ್ಯಾಚಾರಗೈದು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನೇ ಜನ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರತ್ನಗಂಬಳಿ ಹಾಸಿ, ಸನ್ಮಾನಿಸಿ

ದುಷ್ಟರನ್ನು, ಸಮಾಜಘಾತುಕರನ್ನು ಹಿಡಿದು ಸದೆಬಡಿಯಬೇಕಿದ್ದ ಬಿಜೆಪಿ ಸರ್ಕಾರ, ಬದಲಿಗೆ ರೌಡಿ ಶೀಟರ್ ಗಳು, ಕೊಲೆಗಡುಕರನ್ನು ರತ್ನಗಂಬಳಿ ಹಾಸಿ, ಸನ್ಮಾನಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದರ ಫಲವನ್ನು ಜನಸಾಮಾನ್ಯರು ಉಣ್ಣಬೇಕಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪ್ರಶ್ನೆ ಮಾಡಿದ್ರೆ ಜ್ಞಾನೇಂದ್ರ ಕುಣಿದಾಡ್ತಾರೆ

ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದಾಗ ಮೈಮೇಲೆ ಕಂಬಳಿಹುಳ ಬಿದ್ದವರಂತೆ ಕುಣಿದಾಡಿ, ಎಗರಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಸಾಮರ್ಥ್ಯವೇ ಈ ಎಲ್ಲಾ ದೌರ್ಜನ್ಯಗಳಿಗೆ ಕಾರಣ ಎಂದು ಆರೋಪ ಮಾಡಿದ್ದಾರೆ.

ಕೂಡಲೇ ರಾಜೀನಾಮೆ ನೀಡಬೇಕು

ಕಠಿಣ ಕ್ರಮದ ಭರವಸೆ ನೀಡುವ ಗೃಹಸಚಿವರು ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಶಕ್ತರು ಎಂಬ ಜನರ ಮಾತು ನಿಜವಾಗಿದೆ. ಸಾಮರ್ಥ್ಯ, ನೈತಿಕತೆ ಈ ಯಾವುದೂ ಇಲ್ಲದೆ ಕುರ್ಚಿಗೆ ಅಂಟಿಕೊಂಡು ಕೂತಿರುವ ಆರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇನೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅದಕ್ಷತೆಯಿಂದಾಗಿ ರಾಜ್ಯದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಚುನಾವಣಾ ಕಾಲದಲ್ಲಿ ಈ ರೀತಿಯ ಪೊಲೀಸ್ ನಿಷ್ಕ್ರಿಯತೆ ಅಪಾಯಕಾರಿಯಾದುದು. ಆದ್ದರಿಂದ ಚುನಾವಣಾ ಆಯೋಗ ಪೊಲೀಸ್  ಇಲಾಖೆಯ‌ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು ಎಂದು ಮನವಿ‌ ಮಾಡುತ್ತೇನೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES