ಬೆಂಗಳೂರು : 16ನೇ ಆವೃತ್ತಿಯ ಐಪಿಎಲ್ ಆರಂಭವಾಗಿದ್ದು, ಬೆಟ್ಟಿಂಗ್ ದಂಧೆ ನಡೆಯದಂತೆ ಕಣ್ಣಿಡಲಾಗಿದೆ. ಈ ಹಿಂದೆ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದವರಿಗೆ ಬೆಟ್ಟಿಂಗ್ ನಲ್ಲಿ ಭಾಗಿಯಾಗದಂತೆ ವಾರ್ನಿಂಗ್ ನೀಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಬಾನೋತ್, ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ನಷ್ಟಕ್ಕೊಳಗಾಗುವರು ಸರಗಳ್ಳತನ, ಕಳ್ಳತನ, ಆತ್ಮಹತ್ಯೆ ಮೊದಲಾದ ಕೃತ್ಯಗಳಿಗೆ ಮುಂದಾಗುವ ಸಾಧ್ಯತೆ ಇದೆ. ಹಾಗಾಗಿ, ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಮೈಸೂರಲ್ಲಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾವಿದೆ. ವಿಶೇಷವೆಂದರೆ ಚುನಾವಣೆ ವೇಳೆ ಐಪಿಎಲ್ ಬೆಟ್ಟಿಂಗ್ ದಾರರಿಗೂ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದು ರಮೇಶ್ ಬಾನೋತ್ ತಿಳಿಸಿದ್ದಾರೆ.
ಐವರು ರೌಡಿಶೀಟರ್ ಗಡಿಪಾರು
ಜಿಲ್ಲೆಯಾದ್ಯಂತ ಎಂಟು ಚೆಕ್ ಪೋಸ್ಟ್ ಗಳಿದ್ದು, ಈ ಪೈಕಿ ನಗರ ವ್ಯಾಪ್ತಿಯಲ್ಲಿ ಮೂರು ಚೆಕ್ ಪೋಸ್ಟ್ ಗಳು ಬರುತ್ತವೆ.ಈಗಾಗಲೇ ಐವರು ರೌಡಿಶೀಟರ್ ಗಳನ್ನು ಗಡಿಪಾರು ಮಾಡಲಾಗಿದೆ. ಉಳಿದವರಿಗೆ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪರವಾನಗಿ ಮೇಲೆ ಇಟ್ಟುಕೊಂಡಿರುವ ಗನ್, ಬಂದೂಕುಗಳನ್ನು ಪೊಲೀಸ್ ಠಾಣೆಗೆ ನೀಡುವಂತೆ ಸೂಚಿಸಲಾಗಿದೆ. ತೀರಾ ಅಗತ್ಯ ಇರುವವರಿಗೆ ಸೂಕ್ತ ಕಾರಣ ನೀಡಿದರೆ ಸಡಿಲಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.