ಬೆಂಗಳೂರು : ನಕಲಿ ಬಾಂಡ್ ಗಳನ್ನು ಹಂಚಿಕೆ ಪ್ರಕರಣ ಸಂಬಂಧ ಶಾಸಕತ್ವದಿಂದ ಅಸಿಂಧುಗೊಂಡಿರುವ ತುಮಕೂರು ಗ್ರಾಮಾಂತರ ಜೆಡಿಎಸ್ ಮುಖಂಡ ಡಿ.ಸಿ ಗೌರಿಶಂಕರ್ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕತ್ವ ಅಸಿಂಧುಗೊಳಿಸಿರುವುದರಿಂದ 6 ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಶಾಸಕರು (ಬಿ.ಸುರೇಶ್ ಗೌಡ) ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಹೀಗಾಗಿ, ನಾನು ಅಸಿಂಧುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಯಾರಿಗೂ ಯಾವುದೇ ಬಾಂಡ್ ಗಳನ್ನು ಹಂಚಿಕೆ ಮಾಡಿಲ್ಲ. ಅವರು ಯಾರೂ ಅಂತಲೂ ಗೊತ್ತಿಲ್ಲ. ಮಾಜಿ ಶಾಸಕರೇ ಬಾಂಡ್ ಗಳನ್ನು ಹಂಚಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗೌರಿಶಂಕರ್ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ನನ್ನ ಶಾಸಕತ್ವವನ್ನು ಅಸಿಂಧುಗೊಳಿಸಿದೆಯೇ ಹೊರತು ಅನರ್ಹಗೊಳಿಸಿಲ್ಲ ಎಂದು ಜೆಡಿಎಸ್ ಮುಖಂಡ ಡಿ.ಸಿ ಗೌರಿಶಂಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ವೆಂಕಟೇಶ್ ಹಾಗೂ ಮತ್ತಿತರ ಜೆಡಿಎಸ್ ನಾಯಕರು ಇದ್ದರು.