Monday, December 23, 2024

ನಾಳೆ ಶಿವಕುಮಾರ ಶ್ರೀಗಳ 116ನೇ ಜಯಂತೋತ್ಸವ : ರಾಜಕಾರಣಿಗಳಿಗೆ ನೋ ಎಂಟ್ರಿ?

ಬೆಂಗಳೂರು : ಏಪ್ರಿಲ್ 1, ಕರುನಾಡಿನ ಸಮಸ್ತ ಜನತೆಗೆ ಈ ದಿನ ತುಂಬಾನೇ ಸ್ಪೆಷಲ್. ರಾಜ್ಯದ ಜನತೆ ಭಕ್ತಿ-ಪ್ರೀತಿ ಪರಾಕಾಷ್ಠೆ ಮೆರೆಯುವ ದಿನ. ಯಾಕಂದ್ರೆ, ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಹಿರಿಯ ಶ್ರೀ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಗಳ ಜಯಂತೋತ್ಸವ.

ಹೌದು, ಶಿವಕುಮಾರ ಸ್ವಾಮೀಜಿ 116ನೇ ವರ್ಷದ ಗುರುವಂದನಾ ಮಹೋತ್ಸವ ಏಪ್ರಿಲ್ 1(ನಾಳೆ)ರಂದು ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಲಿದೆ. ಈ ನಡುವೆಯೇ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ರಾಜಕಾರಣಿಗಳಿಗೆ ಅವಕಾಶ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಶಿವಕುಮಾರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿತ್ತು. ಮಠದಲ್ಲಿ ಪೂಜೆ, ಸ್ವಾಮೀಜಿ ಸಾಧನೆ ಸ್ಮರಣೆಗೆ ಸೀಮಿತಗೊಂಡಿತ್ತು. ಆದರೆ, ಈ ಬಾರಿ ದೊಡ್ಡ ಮಟ್ಟದಲ್ಲಿ ಗುರುವಂದನಾ ಆಚರಣೆಗೆ ಸಿದ್ಧತೆ ನಡೆದಿದೆ.

ರಾಜಕಾರಣಿಗಳು ಬಂದ್ರೂ ವೇದಿಕೆಗೆ ನೋ ಎಂಟ್ರಿ

ಸಾಮಾನ್ಯವಾಗಿ ಶಿವಕುಮಾರ ಶ್ರೀಗಳ ಸ್ಮರಿಸಿಕೊಳ್ಳಲು ನಾಡಿನ ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಬರುತ್ತಿದ್ದರು. ಚುನಾವಣೆ ನೀತಿ ಸಂಹಿತೆಯಿಂದಾಗಿ ರಾಜಕಾರಣಿಗಳು ಬಂದರೂ ವೇದಿಕೆಯಲ್ಲಿ ಕುಳಿತುಕೊಳ್ಳದೆ ಶ್ರೀಗಳ ಗದ್ದುಗೆ ದರ್ಶನ ಪಡೆದು ಮರಳಲಿದ್ದಾರೆ.

ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ

ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತಿಪಟೂರು ಕೆರಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ ಪೂಜೆ ನೆರವೇರಿದ ನಂತರ ಧಾರ್ಮಿಕ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿವೆ. ವೇದಿಕೆಯಲ್ಲಿ ಸ್ವಾಮೀಜಿಗಳಷ್ಟೇ ಭಾಗವಹಿಸಲಿದ್ದಾರೆ.

RELATED ARTICLES

Related Articles

TRENDING ARTICLES