ಬೆಂಗಳೂರು : ಉತ್ತರಕನ್ನಡದಲ್ಲಿ 2-3 ಕ್ಷೇತ್ರಗಳಲ್ಲಿ ನಾಮಧಾರಿ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ನಾಮಧಾರಿ ಸಮುದಾಯದ ಪ್ರಣವಾನಂದ ಸ್ವಾಮಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಾಮಧಾರಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸದೇ ಕಾಂಗ್ರೆಸ್ ಟಿಕೆಟ್ ನೀಡುವಂತೆ ಶ್ರೀಗಳು ಒತ್ತಾಯಿಸಿದ್ದಾರೆ.
ಸಮುದಾಯ ಮುಗಿಸುವ ಕುತಂತ್ರ
ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಪ್ರಣವನಾಂದ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ದೇಶಪಾಂಡೆ ರಾಜಕೀಯವಾಗಿ ಸಮುದಾಯವನ್ನು ಮುಗಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದುಳಿದ ನಾಮಧಾರಿಗಳನ್ನ ತುಳಿದು ಮೇಲ್ವರ್ಗದವರಿಗೆ ಮಣೆ ಹಾಕುತ್ತಿದ್ದಾರೆ. ಈ ಬಾರಿ ಟಿಕೆಟ್ ನೀಡದಿದ್ದಲ್ಲಿ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಪ್ರಣವಾನಂದ ಸ್ವಾಮಿಗಳು ಎಚ್ಚರಿಸಿದ್ದಾರೆ.
ನಾಮಧಾರಿಗಳಿಗೆ ಕೈ ಟಿಕೆಟ್ ಸಿಗುತ್ತಾ?
ಮೊದಲಿನಿಂದಲೂ ಜಿಲ್ಲೆಯಲ್ಲಿ ನಾಮಧಾರಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಈ ವಿಚಾರವಾಗಿ ಶ್ರೀಗಳು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಸ್ವಾಮೀಜಿ ತಯಾರಿ ನಡೆಸಿದ್ದು, ಕಾಂಗ್ರೆಸ್ ಟಿಕೆಟ್ ನೀಡದೆ ಹೋದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ್ದಾರೆ.