ಬೆಂಗಳೂರು : ಬೊಂಬೆನಗರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ದಳಪತಿ ವಿರುದ್ಧ ಕಾಂಗ್ರೆಸ್ ಕಟ್ಟಾಳು ಯಾರೆಂದು ನಿರ್ಧಾರವಾಗಿಲ್ಲ.
ಹೌದು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹುರಿಯಾಳು ಯಾರಾಗ್ತಾರೆ ಎಂಬುದು ತೀವ್ರ ಕುತೂಹಲ ಮಾಡಿಸಿದೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದಕ್ಕೆ ಪ್ರಸನ್ನಗೌಡ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ.
ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದು, ಕಾಂಗ್ರೆಸ್‌ಗೆ ಬರಲು ಸಿಪಿವೈ ನಿರಾಕರಿಸಿದ್ರೆ ಮಾಜಿ ಸಂಸದೆ ರಮ್ಯಾಗೆ ಮಣೆ ಹಾಕಲಾಗುತ್ತೆ ಎಂಬ ಚರ್ಚೆ ಬಲು ಜೋರಾಗಿದೆ.
ಕಳೆದ ಬಾರಿ ಸ್ಪರ್ಧಿಸಿ ಮಾಜಿ ಸಚಿವ ಎಚ್.ಎಂ.ರೇವಣ್ಣ 30 ಸಾವಿರ ಮತ ಪಡೆದುಕೊಂಡಿದ್ದು, ಈ ಬಾರಿ ಎಚ್.ಎಂ.ರೇವಣ್ಣಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದ್ರೆ ಆಶ್ಚರ್ಯಯಿಲ್ಲ. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಅಭ್ಯರ್ಥಿ ಆಯ್ಕೆ ಹಿನ್ನೆಲೆ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿದೆ.
ಜೆಡಿಎಸ್ ಭದ್ರಕೋಟೆ
ರಾಮನಗರ ಜೆಡಿಎಸ್ ಭದ್ರಕೋಟೆ. ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಕಾಂಗ್ರೆಸ್ ಸುಭದ್ರವಾಗಿದೆ. ಹೀಗಾಗಿ, ಕಾಂಗ್ರೆಸ್ ಕಲಿಗಳು ಮತ್ತೊಂದು ಕ್ಷೇತ್ರವನ್ನು ವಶಕ್ಕೆ ಪಡೆಯಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ರಾಮನಗರದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಭದ್ರ ಪಡಿಸಿಕೊಳ್ಳಲು ಇಕ್ಬಾಲ್ ಹುಸೇನ್ ಅವರನ್ನು ಕಣಕ್ಕಿಳಿಸಲಾಗಿದೆ.