ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ, ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಎಫೆಕ್ಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತಟ್ಟಿದೆ.
ಹೌದು, ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಎಲ್ಲ ಕಡೆ ಕಠಿಣ ಪರಿಶೀಲನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರನ್ನು ಬಿಡದೇ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಹೊರಟ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕಾರನ್ನು ಪರಿಶೀಲನೆ ನಡೆಸಲಾಗಿದೆ.
ಎಸ್ಪಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ತಪಾಸಣೆ
ಈ ವೇಳೆ ಮಾರ್ಗ ಮಧ್ಯೆ ಮಾರಸಂದ್ರ ಸಮೀಪ ಹೊಸಹುಡ್ಯ ಬಳಿಯ ಚೆಕ್ ಪೋಸ್ಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಕಾರನ್ನು ತಪಾಸಣೆ ನಡೆಸಲಾಗಿದೆ.
ಸಿದ್ದುಗೆ ಪ್ರಬಲ ಪೈಪೋಟಿ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಖಂಡಿತವಾಗಿ ಪ್ರಬಲ ಪೈಪೋಟಿ ನೀಡುತ್ತೇವೆ. ಬಿ.ವೈ ವಿಜಯೇಂದ್ರ ಅವರು ಸ್ಪರ್ಧೆ ಮಾಡಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಅಂತಿಮವಾಗಿ ಈ ಬಗ್ಗೆ ಬಿಎಸ್ ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.