ಬೆಂಗಳೂರು : ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ವರಿಷ್ಠರು ಬರುತ್ತಾರೆ. ಏಪ್ರಿಲ್ 9 ರಂದು ಹುಲಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬರುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಸರ್ಕಾರದ ಪೂರ್ವನಿಗದಿತ ಕಾರ್ಯಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಜೊತೆಗೆ ಅಮಿತ್ ಶಾ, ಜೆ.ಪಿ.ನಡ್ಡಾ ಅವರ ಪ್ರವಾಸ ಕಾರ್ಯಕ್ರಮವನ್ನು ಸಮಿತಿಗಳಲ್ಲಿ ನಿರ್ಧರಿಸಿ ಕರ್ನಾಟಕ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಾಗ ಯೋಜಿತವಾಗಿ ಮಾಡಲಾಗುವುದು. ಕಳೆದ ಬಾರಿ ಬಂದಂತೆಯೇ ಈ ಬಾರಿಯೂ ಬರಲಿದ್ದಾರೆ ಎಂದು ಹೇಳಿದ್ದಾರೆ.
ಎಚ್ ಡಿಕೆಗೆ ಯಾರು? ಯಾವಾಗ? ಏನು ಕೊಡ್ತಾರೆ?
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಪಕ್ಷಗಳ ವರಿಷ್ಠರು ಆಫರ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಯಾರು? ಯಾವಾಗ? ಏನು ಕೊಡುಗೆ ನೀಡುತ್ತಾರೆ? ಅವರು ಏನು ಸ್ವೀಕಾರ ಮಾಡುತ್ತಾರೆ? ಎಂದು ಅವರಿಗೇ ಗೊತ್ತು ಎಂದಿದ್ದಾರೆ.
ನಾವು ಬೇರೆ ಪಕ್ಷಗಳ ರೀತಿ ಸುಳ್ಳು ಅಂಕಿ ಸಂಖ್ಯೆಗಳನ್ನು ಹೇಳುವುದಿಲ್ಲ. ನಮಗೆ ಎಲ್ಲಾ ಸಮೀಕ್ಷೆಗಳ ವರದಿ ಬಂದಿದ್ದು, ನಾವು ಬೇರೆ ಪಕ್ಷಗಳಿಗಿಂತ ಮುಂದಿದ್ದೇವೆ. ಇದು ಪಕ್ಷದ ಆಂತರಿಕ ವಿಚಾರವಾಗಿದ್ದು, ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಎಸ್ಸಿ ಪಟ್ಟಿಯಿಂದ ಯಾರನ್ನೂ ತೆಗೆಯಲ್ಲ
ಎಸ್.ಸಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಮುದಾಯಗಳಿಗೆ ಕಾಂಗ್ರೆಸ್ ನವರು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಬಂಜಾರ, ಭೋವಿ, ಕೊರಚ ಯಾರನ್ನೂ ಕೂಡ ಪಟ್ಟಿಯಿಂದ ತೆಗೆಯಲಾಗುವುದಿಲ್ಲ. ಈ ಬಗ್ಗೆ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಇವರೆಲ್ಲಾ ಮಹಾರಾಜರ ಕಾಲದಿಂದಲೂ ಇರುವಂಥ ಸಮುದಾಯಗಳು. ಸಂವಿಧಾನ ಆದ ನಂತರ ಇದ್ದ ಆರು ಸಮುದಾಯಗಳಲ್ಲಿ ಇವೂ ಇದ್ದು, ಇದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆಧಾರ ಸಮೇತವಾಗಿ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.