ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವುದರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 20 ತಿಂಗಳ ಆಡಳಿತ ದರ್ಬಾರು ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.
ಹೌದು, ಮೇ 24, 2023ಕ್ಕೆ ಹಾಲಿ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಇನ್ನೂ, ಸಿಎಂ ಬಸವರಾಜ ಬೊಮ್ಮಾಯಿ 2021ರ ಜುಲೈ 28ರಂದು ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮುಖ್ಯಮಂತ್ರಿ ಆಗಿ (ಮಾರ್ಚ್ 28) ನಿನ್ನೆಗೆ ಅವರು 20 ತಿಂಗಳ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ.
ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸಹದ್ಯೋಗಿಗಳು (ಸಚಿವರು) ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವತನಕ ಕೇವಲ ನಾಮಕಾವಸ್ತೆಗೆ ಆ ಸ್ಥಾನದಲ್ಲಿರುತ್ತಾರೆ.
ಕಟೌಟ್ ಬ್ಯಾನರ್, ತೆರವು
ರಾಜ್ಯದಲ್ಲಿ ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಟೌಟ್ ಬ್ಯಾನರ್ ಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಅಧಿಕಾರಿಗಳು ಆಕ್ಟೀವ್ ಆಗಿದ್ದಾರೆ. ಗದಗ ಜಿಲ್ಲಾದ್ಯಂತ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ರೋಣ ತಾಲೂಕಿನ ಜಕ್ಕಲಿ, ಹೊಳೆಮಣ್ಣೂರು ಗ್ರಾಮಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಬ್ಯಾನರ್‌ಗಳು, ಸಚಿವರ, ಶಾಸಕರ ಕಟೌಟ್ ತೆರವುಗೊಳಿಸಿದ್ದಾರೆ.