ಬೆಂಗಳೂರು : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದು, ಎರಡನೇ ಪಟ್ಟಿ ಸಿದ್ದ ಮಾಡುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಮ್ಮ ಶಾಸಕರಿಗೆ ಕರೆ ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರನ್ನು ಸಂಪರ್ಕಿಸಿರುವುದು ಕಾಂಗ್ರೆಸ್ ಅವರ ಪರಿಸ್ಥಿತಿ ತೋರಿಸುತ್ತದೆ. ಗಟ್ಟಿಯಾದ ಅಭ್ಯರ್ಥಿಗಳಿದ್ದಿದ್ದರೆ ನಮ್ಮ ಶಾಸಕರಿಗೆ ಕರೆ ಮಾಡುತ್ತಿರಲಿಲ್ಲ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಸಾರಾಸಗಟಾಗಿ ಎಲ್ಲರಿಗೂ ಕರೆ ಮಾಡಿ, ನಮ್ಮದಿನ್ನೂ (ಟಿಕೆಟ್) ನಿರ್ಣಯವಾಗಿಲ್ಲ. ನೀವು ಬಂದರೆ ನಿಮಗೆ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ನಮ್ಮ ಪಕ್ಷದವರು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ವಲಸಿಗರು ಸೇರಿದಂತೆ ಮೂಲ ಬಿಜೆಪಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಈ ಬಾರಿ ಸ್ಪಷ್ಟ ಬಹುಮತದ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಸೇವೆಗೆ ಅವಕಾಶ
ಇಷ್ಟು ದಿನ ಜನರ ಅಹವಾಲು ಸ್ವೀಕರಿಸಿದೆ. ಆದರೆ, ಚುನಾವಣಾ ಆಯೋಗ ಇಂದು ಚುನಾವಣೆ ದಿನಾಂಕ ಘೋಷಿಸಿದೆ. ಇನ್ನುಮುಂದೆ ಅಹವಾಲು ಸ್ವೀಕರಿಸಲು ನೀತಿ ಸಂಹಿತೆ ಅಡ್ಡಿ ಆಗಲಿದೆ. ಇಷ್ಟು ದಿನ ಜನರ ಸೇವೆ ಮಾಡಲು ಅವಕಾಶ ದೊರೆತಿತ್ತು. ಕಾನೂನು ಪ್ರಕಾರ ನಾವು ನಡೆದುಕೊಳ್ಳಬೇಕು ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.