ಬೆಂಗಳೂರು : ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಕೋಲ್ಡ್ ವಾರ್ ಉಂಟಾಗಿದೆ. ಈಗಾಗಲೇ ಎಐಸಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದೀಗ, ಎರಡನೇ ಪಟ್ಟಿಯಲ್ಲಿ ತನ್ನ ಬಣದ ಹಾಗೂ ಆಪ್ತರಿಗೇ ಟಿಕೆಟ್ ಕೊಡಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ.
ಹೌದು, ಈ ಕೋಲ್ಡ್ ವಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಎನ್ನುವುದುವು ಮತ್ತೊಂದು ವಿಶೇಷ. ನಿನ್ನೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹಾಸನದ ಬೇಲೂರು ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಡಿಕೆಶಿ ಮತ್ತು ಸಿದ್ದು ನಡುವೆ ಕೋಲ್ಡ್ ವಾರ್ ನಡೆದಿದೆ.
ರಾಜಶೇಖರ್ ಪರ ಸಿದ್ದರಾಮಯ್ಯ ಲಾಬಿ
ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಲಾಬಿ ನಡೆಸಿದ್ದಾರೆ. ಬಿ ಶಿವರಾಂ ಗೆ ಟಿಕೆಟ್ ನೀಡುವಂತೆ ಡಿಕೆಶಿ ಪ್ರಸ್ತಾಪಿಸಿದರೇ, ಬಿ ಶಿವರಾಂ ಸ್ಥಳೀಯರಲ್ಲ, ಮೂರು ಬಾರಿ ಸೋತಿದ್ದಾರೆ. ಸಾಕಷ್ಟು ಅವಕಾಶ ಕೊಟ್ರೂ ಅವರಿಂದ ಗೆಲ್ಲಲಾಗಿಲ್ಲ. ಒಕ್ಕಲಿಗರಿಗೆ ಈಗಾಗಲೇ ಹಾಸನದಲ್ಲಿ ಮೂರಕ್ಕೂ ಹೆಚ್ಚು ಸೀಟು ನೀಡಲಾಗುತ್ತಿದೆ. ಹಾಗಾಗಿ, ಈ ಬಾರಿ ಲಿಂಗಾಯತರಿಗೆ ಟಿಕೆಟ್ ಕೊಡೋಣವೆಂದು ಸಿದ್ದರಾಮಯ್ಯರವರು ಒತ್ತಾಯ ಮಾಡಿದ್ದಾರೆ.
ಲಿಂಗಾಯತರಿಗೆ ಟಿಕೆಟ್ ಕೊಡದಿದ್ದರೆ ಕೆಟ್ಟ ಸಂದೇಶ
ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಲಿಂಗಾಯತರಿಗೆ ಟಿಕೆಟ್ ಕೊಡದಿದ್ದರೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಹಾಗಾಗಿ ರಾಜಶೇಖರ್ ಗೆ ಟಿಕೆಟ್ ನೀಡುವಂತೆ ಸಿದ್ದು ಬ್ಯಾಟಿಂಗ್ ಬೀಸಿದ್ದಾರೆ.
ಒಟ್ಟಾರೆ, ಕಾಂಗ್ರೆಸ್ ಪಾಳಯದಲ್ಲಿ ಯಾವುದೇ ಒಳ ಜಗಳವಿಲ್ಲ. ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ ಎಂದು ಕೈ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಕೈ ನಾಯಕರ ಕೋಲ್ಡ್ ವಾರ್, ಕಾಂಗ್ರೆಸ್ ನಲ್ಲಿ ಹಲವು ಬಣಗಳಿವೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.