ಬೆಂಗಳೂರು : ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕರು ಮಹಾ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಮಾದರಿಯಾಗಬೇಕಿದ್ದ ಕೆಪಿಸಿಸಿ ಅಧ್ಯಕ್ಷರು ತನ್ನ ಎಲ್ಲೆ ಮೀರಿ ವರ್ತಿಸಿದ್ದಾರೆ.
ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಫೈ ಓವರ್ ಮೇಲಿಂದ ವ್ತಕ್ತಿಯೊಬ್ಬ 10 ರೂಪಾಯಿಯ ನೋಟು ಎಸೆದು ಸುದ್ದಿಯಾಗಿದ್ದ. ಡಿಕೆಶಿ ಅವರ ವರ್ತನೆಯೂ ಇಂಥದ್ದೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕ್ಯಾಂತುಗೆರೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಥಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು. ಇದಕ್ಕೂ ಮುನ್ನ ರೋಡ್ ಷೋ ಹಮ್ಮಿಕೊಳ್ಳಲಾಗಿತ್ತು.
ಜನರ ಮೇಲೆ ಹಣ ಎಸೆದ ಡಿಕೆಶಿ
ಪ್ರಜಾಯಾತ್ರೆಯ ರೋಡ್ ಷೋ ವೇಳೆ ಡಿ.ಕೆ ಶಿವಕುಮಾರ್ ಅವರಿಗೆ ಬೃಹತ್ ದ್ರಾಕ್ಷಿ ಹಾರ ಹಾಕಿ ಸ್ವಾಗತ ಕೋರಲಾಗಿತು. ಈ ವೇಳೆ ಡಿಕೆ ಶಿವಕುಮಾರ್ ಅವರು ಜನರ ಮೇಲೆ ಹಣ ಎರಚಿದ್ದಾರೆ. ಮಂಡ್ಯದ ಬೇವಿನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜನರ ಗುಂಪಿನ ಮೇಲೆ ಹಣ ಡಿಕೆಶಿ ಎರಚಿದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಿ.ಕೆ ಶಿವಕುಮಾರ್ ಅವರ ವರ್ತನೆಗೆ ಎಲ್ಲೆಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿ ಕಟ್ಟಿ ಎಂದ ಡಿಕೆಶಿ
ಈ ವೇಳೆ ಮಾತನಾಡಿರುವ ಡಿಕೆಶಿ, ನೀವು ರಾಮ ಮಂದಿರ ಕಟ್ಟುವುದಿರಲಿ ಮೊದಲು ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ಪಕ್ಷದ ಕಚೇರಿ ಕಟ್ಟಿ ಎಂದು ಸಚಿವ ಅಶ್ವತ್ಥನಾರಾಯಣಗೆ ಕುಟುಕಿದ್ದಾರೆ. ಸಿ.ಟಿ ರವಿಗೆ ಕಾಂಗ್ರೆಸ್ ಇತಿಹಾಸ ಏನು ಗೊತ್ತು? ಪಾಪ ಸಿಟಿ ರವಿಗೆ ಇತಿಹಾಸನೇ ಗೊತ್ತಿಲ್ಲ, ಸಿಟಿ ರವಿ ಮೆಂಟಲ್ ಆಸ್ಪತ್ರೆಗೆ ಸೇರಬೇಕೆಂದು ಈ ಹಿಂದೆಯೇ ಹೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.