Monday, December 23, 2024

ಆರಗ ಜ್ಞಾನೇಂದ್ರ ಯಾವ ಬಿಲದಲ್ಲಿ ಗೆಣಸು ಹುಡುಕುತ್ತಿದ್ರು? : ರಾಜ್ಯ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಶಿಕಾರಿಪುರ ನಿವಾಸದ ಮೇಲೆ ಕಲ್ಲು ತೂರಾಟ ಹಾಗೂ ಚಪ್ಪಲಿ ಎಸೆತ ಪ್ರಕರಣ ಸಂಬಂಧ ರಾಜ್ಯ ಕಾಂಗ್ರೆಸ್ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಮನೆ ಮೇಲೆ ದಾಳಿ ನಡೆಸುವಾಗ ಗೃಹ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು ಎಂದು ಟೀಕಾ ಪ್ರಹಾರ ಮಾಡಿದೆ.

ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ? ಆರಗ ಜ್ಞಾನೇಂದ್ರ ಅವರೇ? ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ವ್ಯವಸ್ಥಿತ ಷಡ್ಯಂತ್ರವೇ? ಮೀಸಲಾತಿ ಅವಾಂತರಕ್ಕೂ, ಇದಕ್ಕೆ ಹೊಣೆಗಾರರಲ್ಲದ ಬಿ.ಎಸ್ ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ, ಅವರ ಮನೆ ಮೇಲೆ ದಾಳಿ ಮಾಡಿದ್ದು ಯಾರ “ಸಂತೋಷ”ದ ಕಾರಣಕ್ಕೆ? ಎಂದು ಪ್ರಶ್ನೆ ಮಾಡಿದೆ.

‘ಸಂತೋಷ ಕೂಟ’ದ ಕೈವಾಡ ಇದೆಯೇ?

ಯಡಿಯೂರಪ್ಪ ಅವರು ರಾಜ್ಯ ಮುಖ್ಯಮಂತ್ರಿಯೂ ಅಲ್ಲ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರೂ ಅಲ್ಲ. ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವಿಲ್ಲ. ಹೀಗಿದ್ದರೂ ಸರ್ಕಾರ ಸೃಷ್ಟಿಸಿದ ಅವಾಂತರಕ್ಕೆ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆಗಳು ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಯಡಿಯೂರಪ್ಪ ಅವರ ಮನೆಯ ಮೇಲಿನ ದಾಳಿಯ ಹಿಂದೆ ಬಿಜೆಪಿಯ ‘ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತ ಎಂದು ಗಂಭೀರ ಆರೋಪ ಮಾಡಿದೆ.

ಆರಗ ಜ್ಞಾನೇಂದ್ರ ಹೊಣೆಗೇಡಿತನ?

ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆಗಳು, ಘರ್ಷಣೆಗಳು ನಡೆಯುತ್ತಿರುವುದೇಕೆ? ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಆರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ?  ಅಥವಾ ‘ಸಂತೋಷ ಕೂಟ’ವನ್ನು ಮೆಚ್ಚಿಸುವ ಷಡ್ಯಂತ್ರವೋ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

RELATED ARTICLES

Related Articles

TRENDING ARTICLES