Wednesday, January 22, 2025

ಪವರ್ ಬೇಟೆ ನಂ.20: ‘ಕೈ’ ಶಾಸಕರ ನಿಲುವಿಗೆ ‘ಪವರ್’ ಟಿವಿ ಕ್ಲೀನ್ ಬೌಲ್ಡ್

ಬೆಂಗಳೂರು : ಬರೋಬ್ಬರಿ 19 ಶಾಸಕರ ಲಂಚಾವತಾರ ರೆಡ್ ಹ್ಯಾಂಡ್ ಆಗಿ ಸೆರೆಯಾಗಿದೆ. ರಾಜ್ಯದ ಜನತೆ, ಶಾಸಕರ ಹಣದಾಸೆಯನ್ನು ಕಣ್ಣಾರೆ ಕಂಡಿದ್ದಾರೆ. ಈ ಪೈಕಿ, ನಮ್ಮ ತಂಡದ 20ನೇ ಬೇಟೆ ಇಡೀ ತಂಡಕ್ಕೆ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ!

ಹೌದು, ನಾವು ತೆರೆದಿಟ್ಟ 19 ಶಾಸಕರ ಲಂಚಾವತಾರ ಕಂಡು ಎಲ್ಲ ಶಾಸಕರು ಲಂಚದ ಮಂಚವನ್ನ ಏರುತ್ತಾರೆ ಎಂದರೆ ತಪ್ಪು. ಓಯಸಿಸ್ ರೀತಿಯಲ್ಲಿ ಒಳ್ಳೆಯ, ಪ್ರಾಮಾಣಿಕ ಶಾಸಕರೂ ಇದ್ದಾರೆ ಅನ್ನೋದು ಈ ಭೇಟೆಯಲ್ಲಿ ಅನಾವರಣಗೊಂಡಿದೆ.

ಪವರ್ ಟಿವಿ ತಂಡಕ್ಕೆ ಅಂತಹ ಅಪರೂಪದ ಶಾಸಕರು ಸಿಕ್ಕಿದ್ದಾರೆ. ಡೀಲ್ ಬಗ್ಗೆ ಮಾತನಾಡ್ತಾರೆ ಎಂದುಕೊಂಡಿದ್ದ ಪವರ್ ತಂಡಕ್ಕೆ ಶಾಸಕರ ನಡೆ ಆಶ್ಚರ್ಯ ಉಂಟುಮಾಡಿದೆ. ನಾನು ಅಂತಹ ಶಾಸಕ ಅಲ್ಲ ಅನ್ನೋ ಸಂದೇಶ ರವಾನಿಸಿದ ಶಾಸಕರು ಇವರೇ ನೋಡಿ.

ಹೆಸರು ಯಶವಂತರಾಯ ಗೌಡ ಪಾಟೀಲ್. ಪ್ರಸ್ತುತ ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ. ಯಶವಂತರಾಯಗೌಡ ಪಾಟೀಲರ ನಿಲುವಿಗೆ ಪವರ್ ಟಿವಿ ತಂಡ ಕ್ಲೀನ್ ಬೌಲ್ಡ್​ ಆಗಿದ್ದು, ರಾಜ್ಯದ ಜನತೆಯ ಪರವಾಗಿ ಸಲಾಂ ಹೇಳಿದೆ.

ಶಾಸಕರ ಜೊತೆ ನಡೆದಿದ್ದ ಡೀಲ್?

ಇಂಡಿಯ ಪ್ರವಾಸಿ ಮಂದಿರದಲ್ಲಿ ಪವರ್ ಟಿವಿ ತಂಡ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರನ್ನು ಭೇಟಿ ಮಾಡಿತ್ತು. ಓಎಫ್​ಸಿ ಕೇಬಲ್ ಅಳವಡಿಕೆಗೆ ವಿಷಯ ಪ್ರಸ್ತಾಪಿಸಿಸುತ್ತಿದ್ದಂತೆ ಕೆಲಸ ನೀಟಾಗಿ ಮಾಡಿ ಎಂದು ಶಾಸಕರು ಹೇಳಿದರು. ಯಾರಿಗೂ ತೊಂದರೆ ಆಗದಂತೆ ಕಾಮಗಾರಿ ಮಾಡಿ ಎಂದು ಸೂಚಿಸಿದರು.

ಈ ವೇಳೆಗೆ ನಮ್ಮ ತಂಡ ಲಂಚದ ವಿಷಯ ಪ್ರಸ್ತಾಪಿಸಿತ್ತು. ನಮ್ಮ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಾನು ಅಂತವನಲ್ಲ ಎಂದು ಸಾರಾಸಗಟಾಗಿ ಲಂಚ ಪ್ರಸ್ತಾಪ ತಳ್ಳಿಹಾಕಿದರು. ಹಣದ ಅವಶ್ಯಕತೆ ಇದ್ರೆ ನಾನೇ ನಿಮಗೆ ಕೊಡ್ತೀನಿ, ನೀಟಾಗಿ ಕೆಲಸ ಮಾಡಿ ಎಂದು ಹೇಳಿದರು. ಹೀಗೆ ಸೌಮ್ಯವಾಗಿಯೇ ಹೇಳಿ ತಮ್ಮ ಖಡಕ್ ನಿಲುವನ್ನು ಶಾಸಕರು ತಮ್ಮ ತಂಡಕ್ಕೆ ಸೂಚಿಸಿದರು. ಯಶವಂತರಾಯ ಗೌಡ ಪಾಟೀಲರ ನಿಲುವಿಗೆ ಪವರ್ ಟಿವಿ ತಂಡ ಕ್ಲೀನ್ ಬೌಲ್ಡ್ ಆಗಿತ್ತು​. ಶಾಸಕರ ವ್ಯಕ್ತಿತ್ವಕ್ಕೆ ಮನಸೋತು ಅವರಿಗೆ ಪವರ್ ಟಿವಿ ತಂಡ ನಮಸ್ಕರಿಸಿದೆ.

ಹೆಸರು: ಯಶವಂತರಾಯ ಗೌಡ ಪಾಟೀಲ್

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಇಂಡಿ

ಜಿಲ್ಲೆ: ವಿಜಯಪುರ

ಸ್ಥಳ: ಪ್ರವಾಸಿ ಮಂದಿರ, ಇಂಡಿ

RELATED ARTICLES

Related Articles

TRENDING ARTICLES