ಬೆಂಗಳೂರು : ಮೈಸೂರಿನಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭಾಷಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತೊಗರಿ ಬೆಳೆದ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. 3 ವರ್ಷದಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈಗ ಎಲ್ಲಿ ನೋಡಿದ್ರೂ ಶಂಕು ಸ್ಥಾಪನೆ ಮಾಡ್ತಿದ್ದೀರಿ. ಮೋದಿ ಬಂದು ರೋಡ್ ಶೋ ನಡೆಸ್ತಿದ್ದಾರೆ. ನಿಮ್ಮ ರೋಡ್ ಶೋಗೂ, ನಮ್ಮ ಕಾರ್ಯಕ್ರಮಕ್ಕೂ ವ್ಯತ್ಯಾಸವಿದೆ. ನಾನು ಮೋದಿಗೆ ಕೇಳ್ತೀನಿ, ಎಲ್ಲಿದೆ ನಿಮ್ಮ ಸ್ವಚ್ಛ ಭಾರತ. ಉತ್ತರ ಕರ್ನಾಟಕ್ಕೆ ಬಂದ್ರೆ ರಸ್ತೆ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರ ನೀಡಿದ್ರೆ ಸಾಲಮನ್ನಾ ಮಾಡ್ತೀವಿ
90 ದಿನ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಒಂದೊಂದು ಕಡೆ ಒಂದೊಂದು ಅನುಭವವಾಗಿದೆ. ಕೋಲಾರ ಜಿಲ್ಲೆಯಲ್ಲಿ ನನಗೆ ದೇಣಿಗೆ ಕೊಟ್ಟಿದ್ದಾರೆ. ರೈತರ ಮಕ್ಕಳಿಗೆ ಇವತ್ತು ಗೌರವ ಸಿಗುತ್ತಿಲ್ಲ. ಮದುವೆಯಾಗಲು ಹೆಣ್ಣು ಸಿಗ್ತಿಲ್ಲ. ಬಡವರ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ನಮಗೆ ಅಧಿಕಾರ ನೀಡಿದ್ರೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನ ಮನ್ನಾ ಮಾಡ್ತೇನೆ. ಎಲ್ಲರಿಗೂ ಉಚಿತ ಚಿಕಿತ್ಸೆ, ಹಳ್ಳಿ ಮಕ್ಕಳಿಗೂ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ರಾಜ್ಯದ ಭವಿಷ್ಯ ನಿರ್ಧರಿಸುವ ಸಮಾವೇಶ
ಈ ಸಮಾರಂಭ ಈ ರಾಜ್ಯಕ್ಕೆ ಮಹತ್ವದ ವೇದಿಕೆಯಾಗಿದ್ದು, ರಾಜ್ಯದ ಭವಿಷ್ಯ ನಿರ್ಧರಿಸುವ ಸಮಾವೇಶವಾಗಿದೆ. ರಾಜ್ಯದ ಕೋಟಿ ಕೋಟಿ ಜನರ ಭವಿಷ್ಯದ ದಿನವಾಗಿದ್ದು, ಲಕ್ಷೋಪಾದಿಯಲ್ಲಿ ನೀವೆಲ್ಲರೂ ಸೇರಿದ್ದೀರಿ. ಇದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದ್ದಾರೆ.
ನಾಡಿನ ದೇವತೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ನಮ್ಮ ಮೇಲಿದೆ. ಹಾಗಾಗಿಯೇ ಮೈಸೂರಿನಲ್ಲಿ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮವನ್ನು ನೀವೆಲ್ಲರೂ ಯಶಸ್ವಿಗೊಳಿಸಬೇಕು, ನೀವೆಲ್ಲರೂ ಜನತಾದಳದ ಭವಿಷ್ಯ ಉಳಿಸಬೇಕಾಗಿದೆ, ಮಹತ್ವದ ಕಾರ್ಯಕ್ರಮದಲ್ಲಿ ನೀವೆಲ್ಲ ಸೇರಿದ್ದೀರಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.