ಬೆಂಗಳೂರು : ಎಸ್ಸಿ-ಎಸ್ಟಿ ಮೀಸಲಾತಿ ಕುರಿತಂತೆ ಬಿಜೆಪಿ ಸರ್ಕಾರವನ್ನು ಕೆಣಕಿರುವ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ, ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಳ ಮೀಸಲಾತಿ ವಿಚಾರ ಮುವ್ವತ್ತು ವರ್ಷಗಳಿಂದ ಇತ್ತು. ಆದರೆ, ಕಾಂಗ್ರೆಸ್ ನಾಯಕರು ಆ ಜನಾಂಗದವರ ಮೂಗಿಗೆ ತುಪ್ಪ ಹಚ್ಚಿ ಕೊನೆ ಘಳಿಗೆಯಲ್ಲಿ ಕೈಕೊಟ್ಟಿತು. ನಮಗೆ ಬದ್ಧತೆ ಇದೆ. ಹೀಗಾಗಿ ಇದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ, ಕಾನೂನು ಪ್ರಕಾರ ಮಾಡಿದ್ದೇವೆ ಎಂದರು.
ಯಾಮಾರಿಸಿಕೊಂಡೇ ಬಂದಿದ್ದಾರೆ
ನಾವು ಮಾಡಲು ಆಗದ್ದನ್ನು ಬಿಜೆಪಿಯವರು ಮಾಡಿದ್ದಾರೆ ಅಂತ ಕಾಂಗ್ರೆಸ್ನವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಆದರೆ, ಅದ್ಯಾವುದಕ್ಕೂ ಬೆಲೆ ಇಲ್ಲ. ಅವರು ಯಾವಾಗಲೂ ಎಸ್ಸಿ, ಎಸ್ಟಿ (SC/ST) ಸಮುದಾಯದವರನ್ನು ಯಾಮಾರಿಸಿಕೊಂಡೇ ಬಂದಿದ್ದರು ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನವರು ಹೇಳಿಕೆಗಳ ಮೂಲಕ ಸಹಾನುಭೂತಿ ತೋರಿಸಿದ್ದಾರೆ. ಆ ಮೂಲಕ ಈ ಚುನಾವಣೆಯಲ್ಲಿಯೂ ಯಾಮಾರಿಸಬಹುದು ಅಂತ ಅಂದುಕೊಂಡಿದ್ದರು ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ.