ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದ್ದು, ರಾಷ್ಟ್ರೀಯ ನಾಯಕರ ಆಗಮನವೇ ಕೇಸರಿ ಕಲಿಗಳ ಚುನಾವಣಾ ಅಸ್ತ್ರವಾಗಿದೆ.
ಹೌದು, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಿದ್ದರು. ಇದೀಗ, ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಾಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿಯ ಚುನಾವಣಾ ಪ್ರಚಾರ ವೇಗ ಪಡೆದುಕೊಳ್ಳುತ್ತಿದೆ.
ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡ ಮತ್ತು ಲಿಂಗಾಯತ ಸಮಾಜ ಸುಧಾರಕ ಬಸವೇಶ್ವರರ ಪ್ರತಿಮೆಗಳನ್ನು ಅಮಿತ್ ಶಾ ಅವರು ವಿಧಾನಸೌಧದ ಮುಂಭಾಗದಲ್ಲಿ ಅನಾವರಣಗೊಳಿಸಲಿದ್ದಾರೆ.
ಗೊರಟಾ ಹುತಾತ್ಮ ಸ್ಮಾರಕ ಉದ್ಘಾಟನೆ
ಬಿಜೆಪಿ ಚಾಣಕ್ಯ ಅಮಿತ್ ಶಾ ಬೆಳಗ್ಗೆ 10.30ಕ್ಕೆ ಬೀದರ್ ಜಿಲ್ಲೆಯ ಗೊರಟಾ ಗ್ರಾಮಕ್ಕೆ ಆಗಮಿಸಲಿದ್ದಾರೆ. ಅಲ್ಲಿ, ಗೊರಟಾ ಹುತಾತ್ನ ಸ್ಮಾರಕ ಹಾಗೂ ಪಟೇಲ್ ಸ್ಮಾರಕ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1.45ಕ್ಕೆ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ.
ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳಸಲಿರುವ ಅಮಿತ್ ಶಾ, ಸಂಜೆ 6.30ಕ್ಕೆ ವಿಧಾನಸೌಧದ ಮುಂದೆ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ನಂತರ ಬೆಂಗಳೂರು ಹಬ್ಬ ಉದ್ಘಾಟನೆ ಮಾಡಲಿದ್ದಾರೆ.