Monday, December 23, 2024

ಪ್ರಧಾನಿ ಮೋದಿ ರಣಹೇಡಿ ಎಂದ ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಸಂಸದ ರಾಹುಲ್‌ ಗಾಂಧಿ ಅವರ ಅನರ್ಹತೆಯಿಂದ ಪ್ರಧಾನಿ ನರೇಂದ್ರ ಮೋದಿ ರಣಹೇಡಿಯೆಂದು ಸಾಬೀತಾಗಿದೆ ಎಂದು ಪರಿಷತ್ ವಿಪಕ್ಷ ನಾಯಕ‌ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿ.ಕೆ.ಹರಿಪ್ರಸಾದ್, ಕಳ್ಳರನ್ನು ಕಳ್ಳ ಎಂದು ಹೇಳುವುದು ತಪ್ಪು ಎಂಬ ಭಾವನೆ ಬಿಜೆಪಿಯಲ್ಲಿದೆ ಎಂದು ಕುಟುಕಿದ್ದಾರೆ.

56 ಇಂಚು ನರೇಂದ್ರ ಮೋದಿ ಈ ದೇಶದಲ್ಲಿ ರಣಹೇಡಿ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವ ವಿಚಾರವಾಗಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯಾಯದೇವತೆ ಕಣ್ಣಿಗೆ ಕಪ್ಪುಪಟ್ಟಿ

ರಾಹುಲ್ ಗಾಂಧಿ ಮೇಲೆ ತೆಗೆದುಕೊಂಡ ಕ್ರಮವನ್ನು‌ ಕಾನೂನು, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಕೋರ್ಟ್‌ನಲ್ಲಿ ನ್ಯಾಯದೇವತೆ ಕಣ್ಣಿಗೆ ಕಟ್ಟಿಕೊಂಡಿರುವ ಕಪ್ಪುಪಟ್ಟಿ ಬಿಚ್ಚಿಕೊಂಡಿದೆ. ಈ ಬೆಳವಣಿಗೆ ತಾಪತ್ರಯ ಆಗುತ್ತಿದೆ. ಪ್ರಜಾಪ್ರಭುತ್ವದ ಎಲ್ಲಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಬಗ್ಗೆ  ಮೋದಿಗೆ ಭಯ

ರಾಹುಲ್ ಗಾಂಧಿಯವರ ಬಗ್ಗೆ ನರೇಂದ್ರ ಮೋದಿಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತೆ. ರಾಹುಲ್ ಗಾಂಧಿ ಅನರ್ಹಗೊಳಿಸಿದ ಪ್ರಕ್ರಿಯೆ ಪ್ರಶ್ನಾರ್ಹ. ನರಮೇಧ, ಕೈ, ಕಾಲು ಕತ್ತರಿಸಬೇಕು ಎಂದು ಹೇಳುವವರಿಗೆ ಪಾಕಿಸ್ತಾನಕ್ಕೆ ಓಡಿಸುತ್ತೇವೆ ಎಂದವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ನರಮೇಧದ ಭಾಷಣ ಮಾಡುವವರು ಇನ್ನು ಸಹ ಆರಾಮವಾಗಿ ತಿರುಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗೊಂದು ಕಾನೂನು ಬೇರೆಯವರಿಗೊಂದು ಕಾನೂನೆಂದು ಆಗುತ್ತಿದೆ. ದ್ವೇಷ ಭಾಷಣ ಮಾಡಿದವರು, ಸಂಘರ್ಷಕ್ಕೆ ಕರೆ ಕೊಟ್ಟವರು, ಶಾಂತಿ‌ಸೌಹಾರ್ಧತೆ ಕೆಡಿಸಿದವರ ಮೇಲೆ ಕ್ರಮ ಆಗಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ದ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES