ಬೆಂಗಳೂರು : ಪಾವಗಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ದೇವರ ಹೆಸರನ್ನೇ ಇಟ್ಟುಕೊಂಡಿರುವ ವೆಂಕಟರಮಣಪ್ಪ ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ 3 ಲಕ್ಷ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದು.ಎರಡೂವರೆ ಲಕ್ಷಕ್ಕೆ ಡೀಲ್ ಕುದುರಿಸಿದ್ದಾರೆ.
ಹೌದು, ಮಾಜಿ ಸಚಿವ ಹಾಗೂ ಹಿರಿಯ ನಾಯಕ ಎಂಬ ಲೇಬಲ್ ಇಟ್ಟುಕೊಂಡಿದ್ದಾರೆ ಈ ಕಾಂಗ್ರೆಸ್ ಶಾಸಕ. ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದು, ಬಂದಷ್ಟು ಬಾಚಿಕೊಳ್ಳುವ ಪ್ಲಾನ್ ಮಾಡಿದ್ದಾರೆ.
ಇವರೇ, ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐದನೇ ಶಾಸಕ. ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಮೆಗಾ ಡೀಲ್ ಮಾತುಕತೆ ವೇಳೆ ಶಾಸಕ ವೆಂಕಟರಮಣಪ್ಪರ ಲಂಚಾವತಾರ ಇದೀಗ ರಾಜ್ಯದ ಜನತೆ ಮುಂದೆ ಬಯಲಾಗಿದೆ.
50 ಲಕ್ಷ ಅಡ್ವಾನ್ಸ್
ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ತುಮಕೂರು ಜಿಲ್ಲೆ ಪಾವಗಡದ ಹನುಮಂತಹಳ್ಳಿ ಫಾರ್ಮ್ ಹೌಸ್ನಲ್ಲಿ ಶಾಸಕ ವೆಂಕಟರಮಣಪ್ಪ ಮಾತುಕತೆ ನಡೆಸಿದ್ದಾರೆ. ಕೇಬಲ್ ಅಳವಡಿಕೆಗೆ ಪ್ರತೀ ಕಿಲೋಮೀಟರ್ಗೆ 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಮಾನ್ಯ ಶಾಸಕರಾದ ವೆಂಕಟರಮಣಪ್ಪನವರು. ಅಂತಿಮವಾಗಿ ಕಿಲೋಮೀಟರ್ಗೆ ತಲಾ ಎರಡೂವರೆ ಲಕ್ಷಕ್ಕೆ ಒಪ್ಪಿಗೆ ನೀಡಿದ್ದು, ಅಡ್ವಾನ್ಸ್ ಆಗಿ 50 ಲಕ್ಷ ರೂಪಾಯಿ ನಗದು ಸ್ವೀಕಾರ ಮಾಡುವಾಗ ಶಾಸಕ ವೆಂಕಟರಮಣಪ್ಪ ಪವರ್ ಟಿವಿ ಕ್ಯಾಮೆರಾಗೆ ಸಿಕ್ಕಿಬಿದ್ದಿದ್ದಾರೆ.
ವೆಂಕಟರಮಣಪ್ಪ
ಪಕ್ಷ: ಕಾಂಗ್ರೆಸ್
ವಯಸ್ಸು : 69 ವರ್ಷ
ಕ್ಷೇತ್ರ: ಪಾವಗಡ ವಿಧಾನಸಭಾ ಕ್ಷೇತ್ರ
ಜಿಲ್ಲೆ: ತುಮಕೂರು
ಪ್ರಮುಖ ಅಂಶಗಳು:
ನಾಲ್ಕು ಬಾರಿ ಶಾಸಕರಾಗಿ ಆಯ್ಕೆ
2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಕಾರ್ಮಿಕ ಸಚಿವರಾಗಿದ್ದರು
ರಸ್ತೆ, ಬಸ್ ಕೇಳಿದ್ದಕ್ಕೆ ಯುವಕನಿಗೆ ಕಪಾಳಕ್ಕೆ ಹೊಡೆದು ದರ್ಪ
ಒಟ್ಟು ಆಸ್ತಿ : 1.80 ಕೋಟಿ