ಬೆಂಗಳೂರು : ರಾಜ್ಯದ ಜೀವ ನದಿಯಾಗಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿತ ಕಂಡಿದೆ.
ಹೌದು, ಉತ್ತಮ ಮಳೆಯಾದ ಪರಿಣಾಮ ಕಳೆದ ವರ್ಷ ಕೆಆರ್‌ಎಸ್ ಜಲಾಶಯ ಎರಡು ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಹೀಗಿದ್ದರೂ ಸಹ ಮಾರ್ಚ್ ಮೂರನೇ ವಾರಕ್ಕೆ ಕೆಆರ್‌ಎಸ್‌ನ ನೀರಿನ ಮಟ್ಟ 100 ಅಡಿಗೆ ತಲುಪಿರುವುದು ಆತಂಕ ಮೂಡಿಸಿದೆ.
ಕಳೆದ 4 ವರ್ಷದ ಬಳಿಕ ಇದೇ ಮೊದಲ ಬಾರಿ ಕೆಆರ್ ಎಸ್ ಡ್ಯಾಂನ ನೀರಿನ ಮಟ್ಟ ಬೇಗನೆ 100 ಅಡಿಗೆ ಕುಸಿತ ಕಂಡಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಪ್ರಸ್ತುತ 100 ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ನೀರಿನ ಹಾಹಾಕಾರ ಸಾಧ್ಯತೆ
ಕೆಆರ್ ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 100 ಅಡಿಗೆ ಕುಸಿತ ಕಂಡಿದ್ದರೂ ಜೂನ್ ತಿಂಗಳವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ಮುಂಗಾರು ಮಳೆ ಕೈಕೊಟ್ಟರೆ ಅಥವಾ ತಡವಾದರೆ ಕಾವೇರಿ ನೀರಿಗೆ ಅವಲಂಬಿತವಾಗಿರುವ ಜನರಿಗೆ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆಯಿದೆ.
ಇನ್ನು ಮೇ ತಿಂಗಳ ಅಂತ್ಯಕ್ಕೆ ಕೃಷಿಗೆ ನೀರು ಕೊಡುವುದು ಕಷ್ಟವಾಗಿದ್ದು, ನೀರಿನ ಸಮಸ್ಯೆಯಿಂದಾಗಿ ಡ್ಯಾಂನ ಅಚ್ಚುಕಟ್ಟು ರೈತರಲ್ಲಿ ಸ್ವಲ್ಪ ಆತಂಕ ಎದುರಾಗಲಿದೆ.