Sunday, November 3, 2024

ಒಕ್ಕಲಿಗರಿಗೆ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? : ನಟ ಕಿಶೋರ್ ಪ್ರಶ್ನೆ

ಬೆಂಗಳೂರು : ಉರಿಗೌಡ-ನಂಜೇಗೌಡ ಹೆಸರು ರಾಜ್ಯದಲ್ಲಿ ವಿವಾದ ಸೃಷ್ಟಿಸಿವೆ. ಟಿಪ್ಪು ಸುಲ್ತಾನ್ ನನ್ನು ಕೊಂದಿದ್ದು ಉರಿಗೌಡ-ನಂಜೇಗೌಡ ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದಕ್ಕೆ ಜೆಡಿಎಸ್, ಕಾಂಗ್ರೆಸ್ ವಿರೋಧಿಸಿತ್ತು. ಬಳಿಕ ಹಲವರು ತನ್ನದೇ ಆದ ಪ್ರತಿಕ್ರಿಯೆ ಹಂಚಿಕೊಂಡಿದ್ದರು.

ಇತ್ತೀಚೆಗಷ್ಟೇ ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದ ನಟ ಚೇತನ್ ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದರು. ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ಇದೀಗ, ನಟ ಕಿಶೋರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ಪಕ್ಷ, ಸಂಘಟನೆಯನ್ನು ಉಲ್ಲೇಖಿಸದೆ ಜಾಣ್ಮೆಯಾಗಿಯೇ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ-ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತ ಟಿಪ್ಪು ಸುಲ್ತಾನನನ್ನು ಕೊಂದವರೆಂದು ಹೇಳಿ ಮುಸ್ಲಿಮರು ಹಾಗೂ ಒಕ್ಕಲಿಗರನ್ನೂ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ, ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? ಎಂದಿದ್ದಾರೆ.

ಇದನ್ನೂ ಓದಿ : ಆ ದಿನಗಳು ಖ್ಯಾತಿಯ ನಟ ಚೇತನ್ ಬಂಧನ 

ನಂಜು ಕಾರಿದರು, ಒಕ್ಕಲಿಗರೆಂದರು

ಮೊದಲು ಹಿಂದೂ-ಮುಸ್ಲಿಂ ಅಂದರು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು. ಗಾಂಧಿಯೆಂದರು, ಗಾಂಧಿ ಕೊಂದರು, ರೈತರನ್ನು ಭಯೋತ್ಪಾದಕರೆಂದರು, ಉರಿ ಹೊತ್ತಿಸಿದರು ನಂಜು ಕಾರಿದರು ಒಕ್ಕಲಿಗರೆಂದರು ಟಿಪ್ಪುವೆಂದರು ಬಿಹಾರಿಗಳೆಂದರು ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರು ಭಾಷೆಯೆಂದರು ದೇಶವೆಂದರು, ಇತಿಹಾಸ ತಿರುಚಿದರು, ಸುಳ್ಳು ಸುದ್ದಿ ಹರಡಿದರು.

ಎಚ್ಚರ.. ಇದು ಚುನಾವಣೆಯ ಕಾಲ

ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ವಸುದೇವ ಕುಟುಂಬಕಂನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ ಮಾಡಿದ ಕೆಲಸದ ಮೇಲೆ ಮತಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು. ಚುನಾವಣೆಯ ಕಾಲವಿದು ಎಚ್ಚರ  ಎಂದು ನಟ ಕಿಶೋರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES