ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯದ ಜನತೆಗೆ (ಕನ್ನಡಿಗರಿಗೆ) ಕನ್ನಡದಲ್ಲೇ ಟ್ವಿಟ್ ಮಾಡಿ, ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
‘ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಟ್ವೀಟ್
ನಾಡಿನ ಸಮಸ್ತ ಜನತೆಗೆ ಸಿಎಂ ಬೊಮ್ಮಾಯಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಸಿಎಂ, ಈ ಶೋಭಾಕೃತ್ ನಾಮ ಸಂವತ್ಸರವು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಭರವಸೆಯನ್ನು ನೀಡಿ, ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಬರೆದಿದ್ದಾರೆ.
ಸಿದ್ದರಾಮಯ್ಯ ಯುಗಾದಿ ಸಂದೇಶ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ನಾಡಿನ ಜನತೆಗೆ ಯುಗಾದಿ ಶುಭಾಶಯ ಕೋರಿದ್ದಾರೆ. ಸುಖ-ಸಂತಸದ ಸಿಹಿ, ಕಷ್ಟ- ದುಃಖದ ಕಹಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕೆನ್ನುವ ಜೀವನ ಸಂದೇಶ ಸಾರುವ ಯುಗಾದಿ ಹಬ್ಬ. ನಾಡಿನಲ್ಲಿ ಬದಲಾವಣೆಯ ಹೊಸಪರ್ವಕ್ಕೆ ಮುನ್ನುಡಿಯಾಗಲಿ. ಯುಗಾದಿ ನಾಡಿಗೆ ಮತ್ತು ನಾಡವಾಸಿಗಳಿಗೆ ಒಳಿತನ್ನು ತರಲಿ ಎಂದು ಬರೆದುಕೊಂಡಿದ್ದಾರೆ.
ಡಿಕೆಶಿ ಶುಭಾಶಯ ಹೀಗಿತ್ತು
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ, ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ. ನವ ಸಂವತ್ಸರ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಹೊಸ ಭರವಸೆ ತರಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನೂ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸಹ ಯುಗಾದಿ ಶುಭಾಶಯ ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು. ಈ ಶೋಭಕೃತ್ ಸಂವತ್ಸರವು ಸರ್ವರಿಗೂ ಶ್ರೇಯಸ್ಸು ತರಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.