Wednesday, January 22, 2025

ಕುಮಾರಸ್ವಾಮಿಗೆ ಬೆಂಬಲ ಕೊಟ್ಟಿದ್ದೆ, ಅವ್ರು ಉಳಿಸಿಕೊಳ್ಳಲಿಲ್ಲ : ಡಿ.ಕೆ ಶಿವಕುಮಾರ್

ಬೆಂಗಳೂರು : ನಾನು ಕುಮಾರಣ್ಣನಿಗೆ ಬೆಂಬಲ ನೀಡಿ ಸಹಾಯ ಮಾಡಿದ್ದೇ ಅಲ್ಲವೇ? ಅವರಿಗೆ ಅಧಿಕಾರ ಕೊಟ್ಟು ಆಗಿದೆ. ಅದನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಮಾತನಾಡಿದ ಅವರು, ಯುಗಾದಿ ಹಬ್ಬ ಹಾಗೂ ರಂಜಾನ್ ತಿಂಗಳು ಆರಂಭವಾಗುವ ಮೂಲಕ ಹೊಸ ವರ್ಷ ಆಗಮಿಸಿದೆ. ಈ ಶುಭ ಸಂದರ್ಭದಲ್ಲಿ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದ್ದಾರೆ.

ಮಾತು ಉಳಿಸಿಕೊಳ್ಳುವುದು ಮುಖ್ಯ

ಮಾತು ಕೊಡುವುದಕ್ಕಿಂತ ಉಳಿಸಿಕೊಳ್ಳುವುದು ಬಹಳ ಮುಖ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಕೂಡ ಅಷ್ಟೇ ಮುಖ್ಯ. ನಂಬಿಕೆ ಇಲ್ಲವಾದರೆ ಯಾವುದೇ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮ ಜೀವನದಲ್ಲಿ ಬದಲಾವಣೆ ತರಲಿದೆ, ಬೆಳಕು ನೀಡಲಿದೆ ಎಂಬ ನಂಬಿಕೆ ಇಟ್ಟಿದ್ದೀರಿ. ನಿಮ್ಮ ಈ ನಂಬಿಕೆ ಉಳಿಸಿಕೊಳ್ಳಲು ನಾವು ಶತ ಪ್ರಯತ್ನ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ರಾಜ್ಯದ ಮಹಿಳೆಯರು ಬೆಲೆ ಏರಿಕೆಯಿಂದ ನಿತ್ಯ ಕಷ್ಟಪಡುತ್ತಿದ್ದಾರೆ. ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಡಬಲ್ ಆಗಿವೆ. ಈ ಸಮಯದಲ್ಲಿ ನಿಮ್ಮ ಕಷ್ಟ, ನೋವುಗಳನ್ನು ಆಲಿಸಲು ಪ್ರಜಾಧ್ವನಿ ಯಾತ್ರೆಯಲ್ಲಿ ಇಲ್ಲಿಗೆ ಆಗಮಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಾಲ್ಕು ಗ್ಯಾರಂಟಿ ಕೊಟ್ಟಿದ್ದೇವೆ

ಕಷ್ಟಕ್ಕೆ ಸ್ಪಂದಿಸಲು, ಅವರಿಗೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಮೊದಲ ಗ್ಯಾರಂಟಿ ಗೃಹಜ್ಯೋತಿ ಮೂಲಕ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಎರಡನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ಸಿಗಲಿದೆ.

ಯುವನಿಧಿ ಯೋಜನೆ ಮೂಲಕ ನಿರುದ್ಯೋಗ ಪದವೀಧರ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 3 ಸಾವಿರ ನಿರುದ್ಯೋಗ ಭತ್ಯೆ, ಡಿಪ್ಲೋಮಾ ಮಾಡಿರುವ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್, ಶಾಸಕ ಡಾ. ರಂಗನಾಥ್, ಮಾಜಿ ಸಚಿವೆ ಉಮಾಶ್ರೀ ಹಾಗೂ ಮತ್ತಿತರಿದ್ದರು.

RELATED ARTICLES

Related Articles

TRENDING ARTICLES