ಬೆಂಗಳೂರು : ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ರಾಜಕೀಯ ನಾಯಕರು ಜನರ ಓಲೈಕೆಗೆ ಇತಿಹಾಸ ಕೆದಕುತ್ತಿದ್ದಾರೆ. ಉರಿಗೌಡ, ನಂಜೇಗೌಡ ಹೆಸರನ್ನೇ ಇದೀಗ ಬಿಜೆಪಿಯ ಕೆಲ ನಾಯಕರು ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಸಚಿವ ಮುನಿರತ್ನ ಒಂದು ಹೆಜ್ಜೆ ಮುಂದೆ ಹೋಗಿ ಉರಿಗೌಡ ಹಾಗೂ ನಂಜೇಗೌಡರ ಸಾಧನೆ ಕುರಿತು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಕಥೆ ಒದಗಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಮುನಿರತ್ನಗೆ ಅಶ್ವತ್ಥನಾರಾಯಣ ಶಾಕ್ ನೀಡಿದ್ದಾರೆ.
ಸಚಿವ ಸಹೋದ್ಯೋಗಿ ಮುನಿರತ್ನ ಅವರು ನಿರ್ಮಿಸುತ್ತಿರುವ ಉರಿಗೌಡ ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವೇನೂ ಇಲ್ಲ. ಅದಕ್ಕೆ ನಾನು ಚಿತ್ರಕತೆಯನ್ನೇನೂ ಬರೆಯುತ್ತಿಲ್ಲ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ನನಗೆ ನೈಜ ಅಭಿಮಾನವಿದೆ. ಅವರ ಬಗ್ಗೆ ನಾನು ಇದುವರೆಗೂ ಆಡಿರುವ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ, ಸಿನಿಮಾದ ಭಾಗವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಶ್ರೀಗಳ ಜೊತೆ ಚರ್ಚಿಸಿ, ನಿರ್ಧಾರ
ಉರಿಗೌಡ, ನಂಜೇಗೌಡ ಕಥಾವಸ್ತು ಆಧರಿಸಿ ಸಿನಿಮಾ ಮಾಡುವ ಬಗ್ಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮುನಿರತ್ನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಶ್ರೀಗಳು ಚರ್ಚೆಗೆ ಆಹ್ವಾನ ನೀಡಿದ್ದು, ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಇತಿಹಾಸದ ಬಗ್ಗೆ ಮಾತನಾಡುವವರು ಜಾತಿ ಬಣ್ಣ ನೀಡಬಾರದು. ಸಿನಿಮಾ ಈಗ ಸಾಕಷ್ಟು ಚರ್ಚೆಯಲ್ಲಿದೆ. ನಿರ್ಮಾಪಕನಾಗಿ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ.