Friday, March 29, 2024

ಬೇವು-ಬೆಲ್ಲ ಸವಿಯುವಾಗ ಈ ಶ್ಲೋಕ ಹೇಳಿದ್ರೆ ಸಂಪತ್ತು ಪ್ರಾಪ್ತಿಯಾಗುತ್ತೆ! ಯಾವುದು ಆ ಶ್ಲೋಕ ಗೊತ್ತಾ?

ಬೆಂಗಳೂರು : ಯುಗಾದಿ..! ಯುಗಯುಗ ಕಳೆದರೂ ಹೇಳಬೇಕಾದಷ್ಟು ವಿಶೇಷತೆ ಯುಗಾದಿ ಹಬ್ಬದ ಹಿಂದೆ ಅಡಗಿದೆ. ಹಲವು ಪ್ರಥಮಗಳಿಗೆ ಮುನ್ನುಡಿ ಯುಗಾದಿ ಎಂದರೆ ತಪ್ಪೇನಿಲ್ಲ.

ಹೌದು, ಹೊಸ ವರ್ಷ ಆರಂಭದ ಸಂಕೇತ ಯುಗಾದಿ. ಬ್ರಹ್ಮಾಂಡ ಸೃಷ್ಟಿಯಾದ ದಿನವೂ ಹೌದು. ಬೇವು-ಬೆಲ್ಲದ ಸಿಹಿ-ಕಹಿಗಳ ಮಿಶ್ರಣ. ಹಾಗಿದ್ರೆ, ಬೇವು-ಬೆಲ್ಲದ ಸೇವನೆ ಯಾಕೆ ಮಾಡಬೇಕು? ಇದರ ವೈಶಿಷ್ಟ್ಯವೇನು? ಈ ಬಗ್ಗೆ ನೀವೇನಾದರೂ ಯೋಚಿಸಿದ್ದೀರಾ? ಈ ಕುರಿತ ಸ್ವಾರಸ್ಯಕರ ಮಾಹಿತಿ ನೀವು ತಿಳಿಯಲೇಬೇಕು.

ಬ್ರಹ್ಮ ದೇವ ಈ ಜಗತ್ತನ್ನು ಯಗಾದಿಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನಂತೆ. ಆ ದಿನದಂದು ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನ ಸೃಷ್ಟಿಸಿ ಕಾಲಗಣನೆಯನ್ನು ಆರಂಭಿಸಿದ. ನಂತರ ಜೀವರಾಶಿ, ಜಲರಾಶಿ, ಸಸ್ಯರಾಶಿ ಬೆಟ್ಟ ಗುಡ್ಡಗಳನ್ನ ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಪ್ಲವನಾಮ ಸಂವತ್ಸರಕ್ಕೆ ಪಾದಾರ್ಪಣೆ

ನಾವೆಲ್ಲಾ ಶಾರ್ವರಿ ನಾಮ ಸಂವತ್ಸರ ಕಳೆದು ಪ್ಲವನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಬ್ರಹ್ಮಾಂಡ ಸೃಷ್ಟಿಯಾದ ದಿನ ಯುಗಾದಿಯಂದು ಪ್ರಕೃತಿ ಮಾತೆಯು ನವಚೈತನ್ಯವನ್ನ ತುಂಬಿಕೊಂಡು, ಪೂರ್ಣ ಪ್ರಮಾಣದ ಬಿಸಿಲಿನಲ್ಲಿ ಹಸಿರಾಗಿ ಕಂಗೊಳಿಸುತ್ತಾ ಫಲಪುಷ್ಪಗಳನ್ನ ಮನುಕುಲಕ್ಕೆ ಉಡುಗೊರೆಯಾಗಿ ನೀಡುವ ಕಾಲವಿದು.

ವಿಷ್ಣುವಿನ ಮತ್ಸ್ಯಾವತಾರ ಅನಾವರಣ

ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಈ ಮೊದಲ ಯುಗದ ಆರಂಭವೇ  ಯುಗಾದಿ. ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರ ಮತ್ಸ್ಯಾವತಾರ. ಆ ಆವತಾರವನ್ನು ತಾಳಿದ್ದು ಇದೇ ದಿನವೆಂದು ವೇದಗಳಲ್ಲಿ ಹೇಳಲಾಗಿದೆ. ಬ್ರಹ್ಮನಿಂದ ನಾಲ್ಕು ವೇದಗಳನ್ನು ಕದ್ದಂತಹ ರಕ್ಕಸ ಸೋಮಕಾಸುರ ಸಮುದ್ರದೊಳಗೆ ಅವಿತಿರುತ್ತಾನೆ. ಆಗ ವಿಷ್ಣು ಮತ್ಸ್ಯಾವತಾರವನ್ನ ತಾಳಿ ನೀರಿನಲ್ಲಿ ಅವಿತಿದ್ದ ಸೋಮಕಾಸುರನನ್ನ ಸಂಹರಿಸಿ ನಾಲ್ಕು ವೇದಗಳನ್ನ ಬ್ರಹ್ಮ ದೇವರಿಗೆ ಹಿಂತಿರುಗಿಸುತ್ತಾರೆ. ಹಾಗೆ ಬ್ರಹ್ಮ ದೇವರು ವೇದಗಳನ್ನು ಹಿಂಪಡೆದ ದಿನವೇ ಯುಗಾದಿ.

ರಾಮ ರಾಜ್ಯ ಸ್ಥಾಪಿಸಿದ ದಿನ

ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಶ್ರೀರಾಮಚಂದ್ರರು ಅಯೋಧ್ಯೆಗೆ ಮರಳುತ್ತಾರೆ. ಅಯೋಧ್ಯೆಯಲ್ಲಿ ರಾಜ್ಯಭಾರ ಆರಂಭಿಸುತ್ತಾರೆ. ಯುಗಾದಿಯ ದಿನದಂದೇ ರಾಮರಾಜ್ಯ ಆರಂಭವಾಯಿತು ಎಂದು ಪುರಾಣಗಳಲ್ಲಿದೆ ಉಲ್ಲೇಖವಾಗಿದೆ.

ಹಬ್ಬದ ದಿನ ಪ್ರಥಮ ಕಾರ್ಯ ಏನು?

ಯುಗಾದಿ ಹಬ್ಬದ ದಿನ ಮುಂಜಾನೆ ಎದ್ದ ಕೂಡಲೇ ಅಗಲವಾದ ಪಾತ್ರೆಯಲ್ಲಿ ತುಪ್ಪವನ್ನ ಹಾಕಿ ಮನೆಮಂದಿಯೆಲ್ಲಾ ಅದರಲ್ಲಿ ಮುಖ ನೋಡಿಕೊಳ್ಳಬೇಕು. ಹಾಗೆ ಮಾಡುವುದರಿಂದ ದೃಷ್ಟಿ ನಿವಾರಣೆಯಾಗುತ್ತೆ. ಹಿಂದಿನ ವರ್ಷದಲ್ಲಿ ಅಂಟಿಕೊಂಡ ದೋಶಗಳು ನಿವಾರಣೆಯಾಗುತ್ತವೆಂಬ ಪ್ರತೀತಿಯಿದೆ.

ಇದನ್ನೂ ಓದಿ : ತಿಳಿಯಲೇ ಬೇಕು ಯುಗಾದಿ ಹಿಂದಿನ ಬದುಕಿನ ಸ್ವಾದ-ಸಾರ!

ತೈಲ ಅಭ್ಯಂಜನ

ಯುಗಾದಿಯಂದು ಮೈಗೆಲ್ಲಾ ಹರಳೆಣ್ಣೆ ಹಚ್ಚಿಕೊಂಡು ಕೆಲ ಕಾಲ ಬಿಸಿಲಿಗೆ ಮೈಯೊಡ್ಡಿ ತದನಂತರ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ವೈಜ್ಞಾನಿಕ ಹಿನ್ನಲೆ ಕೂಡ ಇದೆ. ಹರಳೆಣ್ಣೆ ದೇಹವನ್ನು ತಂಪಾಗಿಸುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದೆ.

ಇಷ್ಟದೇವರನ್ನ ಪೂಜಿಸಿ

ಹಬ್ಬದ ದಿನಿ ಮನೆದೇವರು, ಇಷ್ಟದೇವರ ಪೂಜೆ ಸಾಮಾನ್ಯ. ಇಷ್ಟ ದೇವರ ಆರಾಧನೆ ಸಂದರ್ಭದಲ್ಲಿ ತ್ರಿಮೂರ್ತಿಗಳನ್ನು ಭಕ್ತಿಯಿಂದ ನಮಿಸಿದರೆ ವರ್ಷವಿಡೀ ದೈವಕೃಪೆ, ಕುಲದೇವರ ಕೃಪೆ ನಮ್ಮನ್ನು ಕಾಯುತ್ತೆ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಪಂಚಾಗ ಪಠಣ

ಯುಗಾದಿ ಹಬ್ಬದಂದು ಪಂಚಾಗ ಪಠಣ ಹಾಗೂ ಶ್ರವಣದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆಂಬ ಮಾತನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಕಾರ್ಯದಿಂದ, ತಿಥಿಯ ಬಗ್ಗೆ ತಿಳಿದುಕೊಳ್ಳುವುದರಿಂದ ಶ್ರೇಯಸ್ಸು. ವಾರದ ಸ್ಪಷ್ಟ ಕಲ್ಪನೆಯಿಂದ ಆಯುಷ್ಯವೃದ್ದಿ ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಪಾಪ ಪರಿಹಾರ. ಯೋಗದ ಬಗ್ಗೆ ಅರಿತರೆ ರೋಗ ನಿವಾರಣೆ. ಕರಣದ ಬಗ್ಗೆ ತಿಳಿಯುವುದರಿಂದ ಕಾರ್ಯ ಸಿದ್ದಿಯಾಗುತ್ತೆ.

ಬೇವು-ಬೆಲ್ಲ ಸೇವಿಸಬೇಕು

ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲ ಸೇವಿಸುವ ಆಚರಣೆಯು ಇಡೀ ಮನುಕುಲಕ್ಕೆ ಒಂದು ಪಾಠವನ್ನು ಹೇಳುತ್ತದೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು, ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಮಾತನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಶ್ಲೋಕ ಪಠಣೆ ಮಾಡಿ

‘ಶತಾಯುರ್ವಜ್ರದೇಹಾಯ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ’ ಈ ಮಂತ್ರ ಅತ್ಯಂತ ಅರ್ಥಪೂರ್ಣವಾಗಿದೆ. ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾಣೆಗಾಗಿಯೂ ಬೇವೂ ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಬೇವು ಬೆಲ್ಲ ಸೇವಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಒಟ್ನಲ್ಲಿ, ಯುಗಾದಿ ಹಬ್ಬದಂದು ನಮ್ಮ ಸಂಪ್ರದಾಯದಂತೆ ಕೆಲ ಆಚರಣೆಗಳನ್ನು ಪಾಲಿಸಬೇಕು. ಆ ಆಚರಣೆಗಳನ್ನು ಪಾಲಿಸುವುದರಿಂದ ವರ್ಷಪೂರ್ತಿ ಶುಭ ಫಲಗಳನ್ನ ಕಾಣಬಹುದು. ಇದು ಆದಿಕಾಲದಿಂದಲೂ ಮುಂದುವರಿದುಕೊಂಡು ಬಂದಿರುವ ಪ್ರತೀತಿ ಹಾಗೂ ನಂಬಿಕೆಯೂ ಹೌದು.

  • ರಜನಿ ಸುದರ್ಶನ್

RELATED ARTICLES

Related Articles

TRENDING ARTICLES