ಬೆಂಗಳೂರು : ಬೆಳಗಾವಿಯಲ್ಲಿ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿದ್ದ ಯುವ ಕ್ರಾಂತಿ ಸಮಾವೇಶದಲ್ಲಿ 4ನೇ ಗ್ಯಾರಂಟಿ ಯೋಜನೆ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ಉದ್ಯಮಿ ಅದಾನಿಯ ಭಾರತವಲ್ಲ. ಇದು ರೈತರ, ಯುವಕರ ಭಾರತ. ದೇಶದಲ್ಲಿ ಇಂದು ದ್ವೇಷದ ಭಾವನೆ ಬಿತ್ತಲಾಗುತ್ತಿದೆ. ಕರ್ನಾಟಕ ಸರ್ಕಾರ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗುತ್ತಿಗೆದಾರರ ಬಳಿ 40% ಕಮಿಷನ್ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರೂ ಈವರೆಗೆ ಅವರು ಕ್ರಮ ಕೈಗೊಂಡಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕಾಂಗ್ರೆಸ್‌ಗೆ ಒಂದು ಪವಿತ್ರವಾದ ಭೂಮಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ನಾನು ಇಲ್ಲಿಗೆ ಬಂದಿದ್ದೇನೆ. ಬೆಳಗಾವಿ ಕಾಂಗ್ರೆಸ್‌ಗೆ ಒಂದು ಪವಿತ್ರವಾದ ಭೂಮಿಯಾಗಿದೆ. ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಮಹಾತ್ಮ ಗಾಂಧೀಜಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇಂದು ಅದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ್ನಾಗಿ ನನ್ನನ್ನು ಕುಳ್ಳಿರಿಸಿದ್ದೀರಿ ಎಂದಿದ್ದಾರೆ.
ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್ನ ಶಕ್ತಿಶಾಲಿ ಜಿಲ್ಲೆಯಾಗಿತ್ತು. 18ರಲ್ಲಿ 15-16 ಸ್ಥಾನ ಗೆಲ್ಲುತ್ತಿದ್ದೆವು. ಇಂದು ಆ ಪರಿಸ್ಥಿತಿ ಇದೆ, ಖಂಡಿತವಾಗಿ ಹದಿನೆಂಟು ಸ್ಥಾನವನ್ನು ಬೆಳಗಾವಿಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.