ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯ ಅತಿದೊಡ್ಡ ಟಿಆರ್ ಪಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮಾರಂಭವೊಂದರಲ್ಲಿ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಪ್ರತಿಪಕ್ಷದ ಮುಖವಾಗಿದ್ದರೇ. ಯಾರೂ ಪ್ರಧಾನಿ ಮೋದಿಯನ್ನು ಟೀಕಿಸಲು ಸಾಧ್ಯವಾಗುತ್ತಿರಲಿಲ್ಲ. ಸಂಸತ್ತಿನಲ್ಲಿ ಅದಾನಿ ಹಾಗೂ ಎಲ್ ಐಸಿ ವಿಷಯದ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ಈ ಕುರಿತು ಚರ್ಚೆಗಳು ನಡೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳನ್ನು ದೂರುವ ಮೂಲಕ ಮುಂದಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಯಾವುದೇ ಪಕ್ಷದ ಸಾಂಗತ್ಯ ಬೇಕಿಲ್ಲ ಎಂಬುದನ್ನು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಹೀರೋ ಮಾಡಲು ಪ್ರಯತ್ನಿಸುತ್ತಿದೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಿಜೆಪಿ ಹೀರೋ ಮಾಡಲು ಹೊರಟಿದೆ. ಜ್ವಲಂತ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ರಾಹುಲ್ ಗಾಂಧಿ ಅವರು ಬ್ರಿಟನ್‌ನಲ್ಲಿ ಮಾಡಿದ ಹೇಳಿಕೆಗಳಿಗಾಗಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಅವರನ್ನು ಹೀರೋ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ತನ್ನ ಹಿತಾಸಕ್ತಿಗಳನ್ನು ಪೂರೈಸಲು ಇದನ್ನು ಮಾಡುತ್ತಿದೆ. ಆದ್ದರಿಂದ ಇತರ ವಿರೋಧ ಪಕ್ಷಗಳು ಸಾಮಾನ್ಯ ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.