ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಫೀವರ್ವ ಜೋರಾಗಿದೆ. ಬೆಳಗಾವಿಯಿಂದಲೇ ಕಾಂಗ್ರೆಸ್ ಚುನಾವಣೆ ರಣಕಹಳೆ ಮೊಳಗಿಸಲಿದ್ದು, ನಾಳೆ ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಆಗಮಿಸಿ ರಣತಂತ್ರ ರೂಲಿಸಲಿದ್ದಾರೆ.
ಹೌದು, ಎಂಎಲ್ಎ ಎಲೆಕ್ಷನ್ ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ರಾಜಕೀಯ ಪಕ್ಷಗಳು ಈಗಿನಿಂದಲೇ ಮತ ಬೇಟೆ ಶುರುಮಾಡಿದ್ದಾರೆ. ಇತ್ತ, ಕೈ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ದಂಡೇ ಬೆಳಗಾವಿಯತ್ತ ಹರಿದು ಬರಲಿದೆ.
ಯುವ ಕ್ರಾಂತಿ ಸಮಾವೇಶ
ನಾಳೆ ಯುವ ಕ್ರಾಂತಿ ಸಮಾವೇಶ ನಡೆಯುವ ಸಿಪಿಎಡ್ ಮೈದಾನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುರ್ಜೆವಾಲಾ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನಾಳೆ ಬೆಳಗ್ಗೆ 11.30ಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ನಾಳೆ ನಮ್ಮ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವಕ್ರಾಂತಿ ರ್ಯಾಲಿ ನಡೆಯಲಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಯುವಕರ ಭವಿಷ್ಯ ಮೇಲೆ ಬಿಜೆಪಿ ಗ್ರಹಣ
ಕರ್ನಾಟಕದ ಯುವಕರ ಭವಿಷ್ಯ ಮೇಲೆ ಬಿಜೆಪಿ ಸರ್ಕಾರದ ಗ್ರಹಣವಿದೆ. ಯುವಕ್ರಾಂತಿ ರ್ಯಾಲಿಯಿಂದ ಇದಕ್ಕೆ ಮುಕ್ತಿ ಸಿಗಲಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಯುವಕರ ಜೀವನ ಉಜ್ವಲಗೊಳಿಸುವ ಗ್ಯಾರಂಟಿ ಕಾರ್ಡ್ ಅನಾವರಣ ಮಾಡಲಿದ್ದಾರೆ. ಮುಂದೆ ಈ ಕಾರ್ಯಕ್ರಮವನ್ನು ಮೋದಿ ಸರ್ಕಾರ ಸಹ ಜಾರಿ ಮಾಡಬೇಕಾಗುತ್ತದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದಿದ್ದರು. ಆದರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದ್ದು ಶೇ.8ರಷ್ಟು ನಿರುದ್ಯೋಗ ಇದೆ. ಬ್ರ್ಯಾಂಡ್ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಧಕ್ಕೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಗೆ ಹೋಗಿ ಯುವಕರಿಗೆ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡಬಾರದು ಎಂಬ ಉದ್ದೇಶದಿಂದ ಇದನ್ನ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಪ್ರಮುಖ ಅಂಶಗಳು
- ನಾಳೆ ಬೆಳಿಗ್ಗೆ 11.30 ರಾಹುಲ್ ಗಾಂಧಿ ಆಗಮನ
- ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಯುವ ಕ್ರಾಂತಿ ಬೃಹತ್ ರ್ಯಾಲಿ
- ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸಿದ್ಧವಾದ ಬೃಹತ್ ವೇದಿಕೆ
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ
- ಯುವಕರ ಜೀವನ ಉಜ್ವಲಗೊಳಿಸುವ ಗ್ಯಾರಂಟಿ ಕಾರ್ಡ್ ಅನಾವರಣ