ಬೆಂಗಳೂರು : ಸಚಿವ ಮುನಿರತ್ನ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ತಮ್ಮ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ಅವಕಾಶ ನೀಡಿದ್ದೇ ತಪ್ಪಾಯ್ತಾ ಎಂಬ ಪ್ರಶ್ನೆ ಶುರುವಾಗಿದೆ.
ಹೌದು, ಉರಿಗೌಡ ಮತ್ತು ನಂಜೇಗೌಡರ ಹೋರಾಟವನ್ನೇ ಮೂಲ ಕಥೆಯನ್ನಾಗಿ ಇಟ್ಟುಕೊಮಡು ಸಚಿವ ಮುನಿರತ್ನ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಮುನಿರತ್ನರೇ ಘೋಷಣೆ ಮಾಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಎಚ್.ಡಿ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವನಾದರೂ ಸಿನಿಮಾ ಮಾಡ್ಲಿ, ನನಗೇನು ಸಂಬಂಧ ಎಂದಿದ್ದಾರೆ. ಕುಮಾರಸ್ವಾಮಿಯವರ ಹೇಳಿಕೆಯಿಂದ ನಿಖಿಲ್ ಕುಮಾರಸ್ವಾಮಿಗೆ ಕುರುಕ್ಷೇತ್ರದಲ್ಲಿ ಅವಕಾಶ ನಿಡಿದ್ದ ಮುನಿರತ್ನಗೆ ಮುಜುಗರ ಉಂಟುಮಾಡಿದೆ.
ಹೊಲ ಉಳುವ ಬೋರೇಗೌಡನನ್ನು ನೋಡುತ್ತೀರಾ?
ಬಿಜೆಪಿಯವರಿಗೆ ಏನು ಕೆಲಸ ಇಲ್ಲ. ಉರಿಗೌಡ ಮತ್ತು ನಂಜೇಗೌಡ ವಿಚಾರ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಉರಿಗೌಡ ಮತ್ತು ನಂಜೇಗೌಡ ಕಥೆ ಕಟ್ಟಿಕೊಂಡು ಇರ್ತೀರಾ. ಇಲ್ಲ ಹೊಲ ಉಳುವ ಬೋರೇಗೌಡನನ್ನು ನೋಡುತ್ತೀರಾ? ಆಲಿಕಲ್ಲು ಮಳೆ ಬಿದ್ದು ಜನರು ಸಾಯುತ್ತಿದ್ದಾರೆ. ಇದನ್ನ ನೋಡಬೇಕಾ ಅಥವಾ ಕಾಲ್ಪನಿಕ ವಿಚಾರಕ್ಕೆ ಪ್ರಾಶಸ್ತ್ಯವನ್ನು ಕೊಡಬೇಕಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಉರಿಗೌಡ-ನಂಜೇಗೌಡರ ಪ್ರತಿಮೆ ಇಲ್ಲದಿದ್ದರೆ ದೊಡ್ಡ ದೇವಸ್ಥಾನವನ್ನೇ ನಿರ್ಮಿಸಲಿ. ಇದರಿಂದ ಚುನಾವಣೆಯಲ್ಲಿ ಏನು ವರ್ಕೌಟ್ ಆಗಲ್ಲ. ಜನರ ಕಷ್ಟ ನೋಡದೆ, ಹಳೇ ಕಥೆಯನ್ನು ಇಟ್ಕೊಂಡು ಬಂದ್ರೆ ವೋಟ್ ಹಾಕ್ತಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಖಿಲ್ ಪರ ಪ್ರಚಾರ ನಡೆಸಿದ್ದ ಮುನಿರತ್ನ
ನಿಖಿಲ್ ಕುಮಾರಸ್ವಾಮಿ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದ್ದೂರಿ ತಾರಾಂಗಣದಿಂದ ಕೂಡಿದ್ದ ಕುರುಕ್ಷೇತ್ರ ಸಿನಿಮಾವು ಶತದಿನೋತ್ಸವ ಆಚರಿಸಿತ್ತು. ಬಳಿಕ, ಮುನಿರತ್ನ ಹಾಗೂ ನಿಖಿಲ್ ರಾಜಕೀಯಲ್ಲಿ ಸಕ್ರಿಯರಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಮುನಿರತ್ನ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಪರ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.