ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಬೆಂಗಳೂರು ಆಟೊರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಅಲ್ಲದೆ, ನಾಳೆ (ಮಾರ್ಚ್ 20) ನಗರದಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಸಂಘಟನೆ ಹೇಳಿದೆ.
ಸಂಘಟನೆಗಳ ಆಗ್ರಹಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಸೋಮವಾರ ಸಾರ್ವಜನಿಕರಿಗೆ ಆಟೋ ಸೇವೆ ಸಿಗುವುದು ಅನುಮಾನವಾಗಿದೆ. ಇಂದು (ಮಾರ್ಚ್ 19) ಸಂಜೆಯೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೈಕ್ ಟ್ಯಾಕ್ಸಿ ಸೇವೆ ರದ್ದು ಮಾಡದಿದ್ರೆ ನಾಳೆ ಆಟೋ ಸೇವೆ ಬಂದ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಬೈಕ್ ಟ್ಯಾಕ್ಸಿಗಳ ಹಾವಳಿ
ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಆ್ಯಪ್ ಆಧಾರಿತ ಅನಧಿಕೃತ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ. ಸಾರಿಗೆ ಇಲಾಖೆ ಮತ್ತು ಸಾರಿಗೆ ಸಚಿವರ ಕುಮ್ಮಕ್ಕಿನಿಂದ ನಮಗೆ ತೊಂದರೆಯಾಗುತ್ತಿದೆ. ಆಟೊ ಚಾಲಕರ ಸಂಪಾದನೆಯನ್ನು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಸಂಘಟನೆ ಆಕ್ರೋಶ ಹೊರಹಾಕಿದೆ.
ಬೆಂಗಳೂರಿನಲ್ಲಿವೆ 2.10 ಲಕ್ಷ ಆಟೊ
ಬೆಂಗಳೂರಿನಲ್ಲಿ 21 ಆಟೊ ಚಾಲಕರ ಸಂಘಟನೆಗಳಿದ್ದು, 2.10 ಲಕ್ಷ ಆಟೊಗಳಿವೆ. ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ. ಪ್ರತಿಭಟನೆಯ ಸಂಕೇತವಾಗಿ ಆ ಮೂರು ದಿನಗಳಲ್ಲಿ ಎಲ್ಲ ಆಟೊಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದೆ.
ಎಲ್ಲೆಲ್ಲಿ ಬೈಕ್ ಟ್ಯಾಕ್ಸಿ ಸ್ಥಗಿತ?
ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಬೈಕ್ ಟ್ಯಾಕ್ಸಿ ಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ವಿಧಾನಸಭಾ ಎಲೆಕ್ಷನ್ ಗೂ ಮೊದಲೇ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿರ್ಬಂಧಿಸದಿದ್ದರೆ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.